ಅಲೆಮಾರಿ ಜನಾಂಗದ ಮಹಿಳೆಗೆ ಒಲಿದು ಬಂದ ಗ್ರಾಪಂ ಅಧ್ಯಕ್ಷೆ ಪಟ್ಟ

ಬ್ಯಾಡಗಿ,ಏ2: ಅಲೆಮಾರಿ ಜನಾಂಗದ ಮಹಿಳೆಯೊಬ್ಬಳು ತಾಲೂಕಿನ ಕಾಗಿನೆಲೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಸದಸ್ಯೆಯಾಗಿ ಆಯ್ಕೆಯಾಗುವ ಮೂಲಕ ಅದೃಷ್ಟದಾಟದ ಪ್ರಥಮ ಹೆಜ್ಜೆಯಲ್ಲಿಯೇ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೂ ಲಗ್ಗೆಯಿಟ್ಟಿದ್ದು ಅಧಿಕಾರದ ಚುಕ್ಕಾಣಿ ಹಿಡಿಯುವುದು ಶತಸಿದ್ಧವಾಗಿದೆ.

ತಾಲೂಕಿನ ಕಾಗಿನೆಲೆ ಗ್ರಾಮದ ಹೊರವಲಯದಲ್ಲಿನ ರಸ್ತೆಬದಿ ಜೋಪುಡಿಯಲ್ಲಿ ವಾಸವಾಗಿರುವ ದುರುಗಮುರುಗಿ ಜನಾಂಗದ ಗುತ್ತೆಮ್ಮ ನಾಗರಾಜ ದುರುಗಮುರಗಿ ಗ್ರಾಮಸ್ಥರ ಒತ್ತಾಸೆಯಂತೆ ಕಾಗಿನೆಲೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ 4ನೇ ವಾರ್ಡಿನಲ್ಲಿ ಪರಿಶಿಷ್ಠ ಪಂಗಡದ ಸ್ಥಾನಕ್ಕೆ ಮೀಸಲಿದ್ದ ಸ್ಥಾನದಿಂದ ಸ್ಪರ್ಧೆಗೆ ಇಳಿದಿದ್ದರು. ಆರಂಭದಿಂದಲೂ ದುರುಗಮುರುಗಿ ಜನಾಂಗದ ಗುತ್ತೆಮ್ಮ ನಾಗರಾಜ ದುರುಗಮುರುಗಿ ಗೆಲ್ಲುವ ನೆಚ್ಚಿನ ಅಭ್ಯರ್ಥಿಯಾಗಿದ್ದರು. ಬುಧವಾರ ನಡೆದ ಮತ ಎಣಿಕೆ ಯಲ್ಲಿ ಗೆಲುವಿನ ನಗೆ ಬೀರುವ ಮೂಲಕ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದು, ಕಾಗಿನೆಲೆ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಯಾವುದೇ ಪೈಪೆÇೀಟಿ ಇಲ್ಲದೇ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.

ಬಾಕ್ಸ್…

ಊರೂರು ತಿರಕೊಂಡ್ ಜೀವನಾ ಮಾಡೋರು ನಾವು.. ಇದ ಊರಾಗ ಬಾಳಾ ವರ್ಷದಿಂದ ಜೀವನಾ ಮಾಡಾಕತ್ತೈವ್ರಿ..
ದ್ಯಾವರ ದಯದಿಂದ ಊರಾಗಿನ ಜನರ ಆಶೀರ್ವಾದದಿಂದ ಪಂಚಾಯ್ತಿ ಚುನಾವಣ್ಯಾಗ ಸ್ಪರ್ಧಾ ಮಾಡಿದ್ರಿ..ಈಗಾ ಗೆದ್ದ ಬಂದೇನಿ, ಜನರ ಆಸೆಯಂಗ ನನಗ್ ಅಧಿಕಾರ ಬಂದೈತಿ..ಅದನ್ನ ಒಳ್ಳೆ ಕೆಲಸಕ್ಕ ಉಪಯೋಗ ಮಾಡ್ತೇನರೀ.. ಅದಕ್ ಎಲ್ಲಾರೂ ನನಗ ಸಹಕಾರ ಮಾಡಬೇಕ್ರಿ..