ಅಲೆಮಾರಿ ಜನಾಂಗದವರು ಸರ್ಕಾರದ ಸೌಲಭ್ಯಗಳು ಪಡೆಯಲು ಅರಿವು ಕಾರ್ಯಕ್ರಮ

ಬೀದರ, ಜ. 09ಃ ಜಿಲ್ಲಾ ಪಂಚಾಯತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ನೌಬಾದಿನ ಆಟೋನಗರದಲ್ಲಿ ಅಲೆಮಾರಿ ಹಾಗೂ ಅರೆಅಲೆಮಾರಿ ಜನಾಂಗದವರಿಗೆ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಅಲೆಮಾರಿ ಸಮುದಾಯದ ಮಕ್ಕಳು ಟಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಕಲಾವಿದರ ಬಳಗದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರು ಮಾತನಾಡುತ್ತ, ರಾಜ್ಯ ಸರ್ಕಾರ ಅಲೆಮಾರಿ ಹಾಗೂ ಅರೆಅಲೆಮಾರಿ ಜನಾಂಗದವರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯ ಭಾಲ್ಕಿ, ಔರಾದ, ಬಸವಕಲ್ಯಾಣ ಮತ್ತು ಬೀದರ ತಾಲೂಕಿನಲ್ಲಿ ಜಾನಪದ ಕಲಾವಿದರ ಬಳಗದ ಕಲಾ ತಂಡದವರು ಜನರ ಮನಮುಟ್ಟುವಂತೆ ನಾಟಕ ಮತ್ತು ಹಾಡುಗಳ ಮೂಲಕ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದರು.
ಅಲೆಮಾರಿ ಹಾಗೂ ಅರೆಅಲೆಮಾರಿ ಸಮುದಾಯದವರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಹಾಗೂ ತಮ್ಮ ಕುಟುಂಬದ ಮತ್ತು ಮಕ್ಕಳ ಭವಿಷ್ಯ ರೂಪಿಸಿಕೊಳ್ಳಬೇಕು. ಹಾಡಿನ ಮೂಲಕ ಬಾಲ್ಯವಿವಾಹ ಮಾಡಬಾರದು, ಮಕ್ಕಳಿಗೆ ಕಡ್ಡಾಯವಾಗಿ ಶಿPಕ್ಷಣ ಕೊಡಿಸಿ ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದು ಅಲೆಮಾರಿ ಜನಾಂಗದ ಜನರಿಗೆ ತಿಳಿಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೀದರ ತಾಲೂಕಾಧಿಕಾರಿ ಎಸ್. ಗದಗೆಪ್ಪ ಅವರು ಮಾತನಾಡುತ್ತ, ರಾಜ್ಯ ಸರ್ಕಾರದಿಂದ ಅಲೆಮಾರಿ ಹಾಗೂ ಅರೆಅಲೆಮಾರಿ ಸಮುದಾಯದ ಜನರಿಗೆ ನಿವೇಶನ ಇಲ್ಲದವರಿಗೆ, ನಿವೇಶನ, ನಿವೇಶನವಿದ್ದರೆ ಮನೆ ಕಟ್ಟಿಸಿಕೊಡಲಾಗುವದು. 1 ರಿಂದ ಸ್ನಾತಕೋತ್ತರ ಪದವಿಯವರಗೆ ವಿದ್ಯಾಭ್ಯಾಷ ಮಾಡುವ ವಿದ್ಯಾರ್ಥಿಗಳಿಗೆ ಮಾಸಿಕ ಶಿಷ್ಯವೇತನ ನೀಡಲಾಗುವುದು. 10 ರಿಂದ 20 ಕುಟುಂಬಗಳಿರುವ ಓಣಿಯಲ್ಲಿ ಸರ್ಕಾರದಿಂದ ಮೂಲಭೂತ ಸೌಲಭ್ಯಗಳು ಕಲ್ಪಿಸಲಾಗುವುದು. ಇದರ ಸದುಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕಿನ ಚೊಂಡಿ ಗ್ರಾಮದ ಕರ್ಮಭೂಮಿ ಜಾನಪದ ಕಲಾ ತಂಡ ಶಂಕರ ಚೊಂಡಿ ಅವರ ನೇತೃತ್ವದ ತಂಡದ ಕಲಾವಿದರು ಹಾಡುಗಳ ಹಾಗೂ ನಾಟಕದ ಮೂಲಕ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೀದರ ತಾಲೂಕಾ ವಿಸ್ತ್ರಣಾಧಿಕಾರಿ ಸಿ.ಜಿ. ಚೌಧರಿ, ಡಿ. ದೇವರಾಜ ಅರಸ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ, ಜೋಷಿ ಸಮಾಜದ ಅಜಯಕುಮಾರ, ರಾಜಕುಮಾರ, ಅಲೆಮಾರಿ ಹಾಗೂ ಅರೆಅಲೆಮಾರಿ ಸಮಾಜದ ಹಿರಿಯ ಮುಖಂಡ ಮಾನಪ್ಪ, ಮಹರ್ಷಿ ವಾಲ್ಮೀಕಿ ಸಾಮಾಜಿಕ ಹಾಗೂ ಸಾಂಸ್ಕøತಿಕ ಟ್ರಸ್ಟ ಅಧ್ಯಕ್ಷರಾದ ಸುನೀಲ ಭಾವಿಕಟ್ಟಿ ಅವರು ಸೇರಿದಂತೆ ಅಲೆಮಾರಿ ಹಾಗೂ ಅರೆಅಲೆಮಾರಿ ಸಮಾಜದ ಮಹಿಳೆಯರು, ಮಕ್ಕಳು, ಹಿರಿಯರು ಇದ್ದರು.