ಅಲೆಮಾರಿ ಜನಾಂಗದವರಿಗೆ ಆಹಾರದ ನೆರವು

ದಾವಣಗೆರೆ. ಜೂ.೧೦; ಕೊರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರದ ಲಾಕ್‌ಡೌನ್ ಕ್ರಮದಿಂದ ದುಡಿದು ತಿನ್ನುವ ಜನರು ಬೀದಿಗೆ ಬಿದ್ದಿದ್ದಾರೆ. ಅನ್ನ ನೀರಿಗಾಗಿ ಪರದಾಡುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸ ದೇವರ ಪೂಜೆಗಿಂತಲೂ ಶ್ರೇಷ್ಠವಾದುದು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್ ಅಭಿಪ್ರಾಯ ಪಟ್ಟರು. ಅವರಿಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್‌ನ ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ವಿಭಾಗದಿಂದ ನಗರದ ಪಿ.ಬಿ. ರಸ್ತೆಯ ಪೂಜಾ ಹೋಟೇಲ್ ಸಮೀಪ ವಾಸಿಸಿರುವ ಹಕ್ಕಿಪಿಕ್ಕಿ ಅಲೆಮಾರಿ ಜನಾಂಗದ ಬಡಜನರಿಗೆ ಊಟ ನೀರು ವಿತರಿಸಿ ಮಾತನಾಡಿದರು. ಕೊರೊನಾ ಸಂಕಷ್ಟದಿಂದ ಬಡಜನರು ಹಸಿವಿನಿಂದ ನರಳುತ್ತಿದ್ದಾರೆ. ಇಂತಹ ಜನರನ್ನು ಹುಡುಕಿ ಕಾಂಗ್ರೆಸ್ ಕಾರ್ಯಕರ್ತರು ಅವರ ನೆರವಿಗೆ ಬರಬೇಕೆಂದು ಅವರು ಕರೆ ನೀಡಿದರು. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ರವರು ಮತ್ತು ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಬಡಜನರ ನೆರವಿಗೆ ಕಾಂಗ್ರೆಸ್ ಪಕ್ಷ ನಿಲ್ಲಬೇಕೆಂದು ಮನವಿ ಮಾಡಿದ್ದು ಅವರ ಆಶಯದಂತೆ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಡಜನರನ್ನು ಗುರುತಿಸಿ ಮಾನವೀಯ ದೃಷ್ಟಿಯಿಂದ ತಮ್ಮ ಕೈಲಾದ ಸಹಾಯವನ್ನು ಎಲ್ಲರು ಮಾಡಬೇಕೆಂದು ಅವರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಂ. ಮಂಜುನಾಥ್ ಇತರರಿದ್ದರು.