ಅಲೆಮಾರಿ ಜನಾಂಗಕ್ಕೆ ನಿವೇಶನ ನೀಡಲು ಆಗ್ರಹ : ಅರವಿಂದ ಅರಳಿ

ಔರಾದ :ಜು.19: ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಮಂಜೂರಾದ ಭೂಮಿಯಲ್ಲಿ ನಿವೇಶನ ನೀಡಲು ಹಿಂದೆಟು ಹಾಕುತ್ತಿರುವುದು ಸರಿಯಲ್ಲ. ಎರಡು ತಿಂಗಳೊಳಗೆ ನಿವೇಶನ ಹಂಚಿಕೆ ಮಾಡದಿದ್ದಲ್ಲಿ ತಹಸೀಲ್ದಾರ್ ಕಛೇರಿ ಎದುರು ಧರಣಿ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ ಅರಳಿ ಎಚ್ಚರಿಸಿದ್ದಾರೆ.

ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳಿಯ ಶಾಸಕರು ಅಡ್ಡಿಪಡಿಸುತ್ತಿದ್ದಾರೆ. ನಿರಂತರ ಎರಡು ದಶಕಗಳ ಹೋರಾಟದ ನಂತರ ಜಿಲ್ಲಾಧಿಕಾರಿಗಳು ಅಲೆಮಾರಿ ಜನಾಂಗದ ಕುಟುಂಬಗಳಿಗೆ ಮಂಜೂರು ಮಾಡಿರುವ ಭೂಮಿ ಇಲ್ಲಿವರೆಗೂ ಹಂಚಿಕೆ ಮಾಡದಿರುವುದು ಶೋಚನಿಯವಾಗಿದೆ. ನಿವೇಶನ ಹಂಚಿಕೆ ಮಾಡಲು ಈ ಹಿಂದೆ ಸರ್ಕಾರ 2 ಎಕರೆ ಜಮೀನು ಮಂಜೂರು ಮಾಡಿದೆ, ಆದರೆ ಸ್ಥಳೀಯ ಶಾಸಕರ ನಿರ್ಲಕ್ಷ್ಯತನದಿಂದ ನಿವೇಶನ ಹಂಚಿಕೆ ಆಗಿಲ್ಲ, ಔರಾದ ಅಭಿವೃದ್ಧಿ ಕೆಲಸಗಳಿಗೆ ಸಚಿವ ಪ್ರಭು ಚವ್ಹಾಣ ಅಡ್ಡಿ ಪಡಿಸುತ್ತಿದ್ದಾರೆ, ರಾಜ ಧರ್ಮ ಮರೆತು ರಾಜಕೀಯ ಮಾಡುವ ಮೂಲಕ ಬಡವರಿಗೆ ನಿವೇಶನ ಹಂಚಿಕೆ ಮಾಡುವುದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಚಿವರು ಮಧ್ಯೆ ಪ್ರವೇಶಿಸಲಿ :
ಸಚಿವರ ಹುನ್ನಾರದಿಂದಲೇ ವಿಳಂಬವಾಗುತ್ತಿದೆ ಎಂದು ಆರೋಪಿಸಿದ ಅವರು, ಸಚಿವ ಪ್ರಭು ಚವ್ಹಾಣ ತಾರತಮ್ಯ ಬಿಟ್ಟು ಮಧ್ಯೆ ಪ್ರವೇಶಿಸಿ ನಿವೇಶನ ಹಂಚಿಕೆ ಮಾಡಬೇಕು. ರಾಜಕೀಯ ಬಿಟ್ಟು ಅಭಿವೃದ್ಧಿ ಕಡೆಗೆ ಗನಹರಿಸಿ. ಚುನಾವಣೆ ಬಂದಾಗ ರಾಜಕೀಯ ಮಾಡಿ ಎಂದರು.

ಸರ್ವೆ ಸಂಖ್ಯೆ 182ರಲ್ಲಿ ಒಟ್ಟು 47 ಎಕರೆ ಜಮೀನಿದ್ದು, ಅದರಲ್ಲಿ 115 ಜನರಿಗೆ ಮನೆ ಹಂಚಿಕೆ ಮಾಡುವಂತೆ ಎರಡು ಎಕರೆ ಭೂಮಿ ಮಂಜೂರು ಮಾಡಿರುತ್ತಾರೆ. ಜಿಲ್ಲಾಧಿಕಾರಿಗಳು ಮಂಜೂರುಮಾಡಿ ವರ್ಷಗಳೇ ಕಳೆದರೂ ಅಲೆಮಾರಿ ಜನಾಂಗಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲೆಮಾರಿ ಜನಾಂಗ ವಾಸಿಸುವ ಸ್ಥಳಕ್ಕೆ ಭೇಟಿ ನೀಡಿ ಎಲ್ಲ ಕುಟುಂಬಗಳಿಗೆ ನ್ಯಾಯಸಮ್ಮತವಾಗಿ ನಿವೇಶನ ಕೊಡಿಸುವುದಾಗಿ ಭರವಸೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್‍ನ ಹಿರಿಯ ಮುಖಂಡ ರಾಮಣ್ಣ ವಡೆಯರ್, ಶಿವರಾಜ ದೇಶಮುಖ, ಮಾಜಿ ತಾಪಂ ಉಪಾಧ್ಯಕ್ಷ ನೆಹರು ಪಾಟೀಲ್, ಬಾಬುರಾವ ತಾರೆ, ದತ್ತಾತ್ರಿ ಬಾಪೂರೆ, ಅಂಜಾರೆಡ್ಡಿ, ಡಾ. ಫಯಾಜ ಅಲಿ ಉಪಸ್ಥಿತರಿದ್ದರು.