ಅಲೆಮಾರಿ ಕುಟುಂಬ ತಾಣಗಳಿಗೆ ಡಿ.ಹೆಚ್.ಓ ಭೇಟಿ

ಚಿತ್ರದುರ್ಗ.ಮಾ.16:ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಮಾಪ್ ಅಪ್ ರೌಂಡ್ ಕಾರ್ಯಕ್ರಮ ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಅಲೆಮಾರಿ, ಅರೆ ಅಲೆಮಾರಿ, ಕಟ್ಟಡ ಕಾರ್ಮಿಕರು ವಾಸಿಸುವ ತಾಣಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಬುಧವಾರ ಭೇಟಿ ನೀಡಿ, 19 ವರ್ಷದೊಳಗಿನ ಅಲೆಮಾರಿ ಮಕ್ಕಳಿಗೆ ಜಂತುನಾಶಕ ಮಾತ್ರೆ ವಿತರಿಸಿದರು.
  ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್, ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ನೀಡಿದ ಮಾರ್ಗದರ್ಶನಂತೆ ಈಗಾಗಲೇ ಜಿಲ್ಲೆಯಲ್ಲಿ ಅಲೆಮಾರಿ, ಸೇವಾವಂಚಿತ ಕಟ್ಟಡ ಕಾರ್ಮಿಕ ವಲಸೆ ಕುಟುಂಬದ ಮಕ್ಕಳಿಗೆ ಅವರ ತಾಣಗಳನ್ನು ತಲುಪಲು ದುಸ್ಥರ ಸ್ಥಳಗಳಲ್ಲಿ ವಾಸಿಸುವ ಕುಟುಂಬದ ಡೇರೆಗಳನ್ನು ಜಿಲ್ಲಾ ಕ್ರಿಯಾಯೋಜನೆಯಲ್ಲಿ ಗುರುತಿಸಲಾದ ತಾಣಗಳಿಗೆ ಭೇಟಿ ನೀಡಿ ಜಂತು ನಾಶಕ ಮಾತ್ರೆ ವಿತರಿಸಲಾಗಿದೆ ಎಂದರು.ಚಿತ್ರದುರ್ಗ ನಗರದ ಸುತ್ತಮುತ್ತಲಿನ 6 ತಾಣಗಳು, ಕ್ಯಾಸಾಪುರ, ಮೆದೇಹಳ್ಳಿ ಹೊಲಗಳಲ್ಲಿ ಇದ್ದಿಲು ಸುಡಲು ಬಂದಿದ್ದ ಮಹಾರಾಷ್ಟ್ರ, ಆಂಧ್ರಪ್ರದೇಶದ ಅಲೆಮಾರಿ ಕುಟುಂಬದ ಮಕ್ಕಳಿಗೆ ಜಂತು ನಾಶಕ ಮಾತ್ರೆ ನುಂಗುವ ಮಹತ್ವ, ವೈಯುಕ್ತಿಕ ಸ್ವಚ್ಛತೆ ಕುರಿತು ತಿಳುವಳಿಕೆ ನೀಡಲಾಗಿದ್ದು, ಚಿತ್ರದುರ್ಗ ತಾಲ್ಲೂಕು ಹೊರತುಪಡಿಸಿ ಇನ್ನೂ ಉಳಿದ ಐದು ತಾಲ್ಲೂಕುಗಳಲ್ಲಿಯೂ ತಲಾ ಒಂದೊಂದು ತಾಣಗಳನ್ನು ಗುರುತಿಸಿ, ಅಲ್ಲಿರುವ ಅಲೆಮಾರಿ ಮಕ್ಕಳಿಗೆ ಜಂತುನಾಶಕ ಮಾತ್ರೆ ವಿತರಿಸಲು ಕ್ರಮಜರುಗಿಸಲಾಗಿದೆ ಎಂದು ತಿಳಿಸಿದರು.ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಮಾತನಾಡಿ ತಾಲ್ಲೂಕಿನಲ್ಲಿ ಒಟ್ಟು 8 ಅಲೆಮಾರಿ ತಾಣಗಳನ್ನು, ಅಲ್ಲಿಯ ಒಟ್ಟು 360 ಮಕ್ಕಳನ್ನು ಗುರುತಿಲಾಗಿತ್ತು. ಅದರಂತೆ ಬುಧವಾರ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನದ ಮಾಪ್ ಅಪ್ ರೌಂಡ್ ಪ್ರಯುಕ್ತ ಈ ಎಲ್ಲಾ ತಾಣಗಳಲ್ಲಿ 360 ಮಕ್ಕಳಿಗೆ ಜಂತು ನಾಶಕ ಮಾತ್ರೆ ವಿತರಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಧರ್, ರಂಗಾರೆಡ್ಡಿ, ನವೀನ್, ಸಂದೀಪ್ ಇತರರು ಇದ್ದರು.