ಅಲೆಮಾರಿ ಕುಟುಂಬದ ಗುಡಿಸಲುಗಳು ಧ್ವಂಸ

ಪಾವಗಡ, ಜು. ೧೮- ಅರಣ್ಯ ಪ್ರದೇಶದಲ್ಲಿ ಗುಡಿಸಲು ನಿರ್ಮಿಸಿಕೊಳ್ಳಲಾಗಿದೆ ಎಂಬ ಕಾರಣಕ್ಕೆ ೪೦ಕ್ಕೂ ಹೆಚ್ಚು ಅಲೆಮಾರಿ ಕುಟುಂಬದ ಗುಡಿಸಲುಗಳನ್ನು ಧ್ವಂಸ ಮಾಡಲಾಗಿದ್ದು, ಬಡ ಕುಟಂಬಗಳು ಬೀದಿಗೆ ಬಿದ್ದಿವೆ.
ಪಟ್ಟಣದ ವೆಂಕಟಾಪುರ ರಸ್ತೆ ಹೌಸಿಂಗ್‌ಬೋರ್ಡ್ ಸಮೀಪದಲ್ಲಿ ವಾಸವಿರುವ ೧೦೦ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ೪೦ ಗುಡಿಸಲು ಏಕಾಏಕಿ ಧ್ವಂಸವಾಗಿವೆ.
ಯಾರೂ ಇಲ್ಲದಿರುವುದನ್ನೇ ಗುರಿಯಾಗಿಸಿಕೊಂಡು ಗುಡಿಸಲು ಕಿತ್ತು ಹಾಕಲಾಗಿದ್ದು, ಬೀದಿಗೆ ಬಿದ್ದಿರುವ ಕುಟುಂಬ ಸೂಕ್ತ ನೆಲೆ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದೆ.
ಅಲೆಮಾರಿ ಜೀವನ ಬಿಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಸಲುವಾಗಿ ಕಾಡಬೇಡಿ, ಖಾಸಗಿಯವರ ಜಮೀನಿನಲ್ಲಿ ಗುಡಾರ ಹಾಕಿಕೊಂಡಿದ್ದೆವು. ಪೆಟ್ರೋಲ್ ಬ್ಯಾಂಕ್ ಹಿಂಭಾಗ ಖಾಲಿ ಇದ್ದ ಜಾಗದಲ್ಲಿ ನಿವೇಶನ ಕೊಡುವ ಭರವಸೆಯಿಂದ ಗುಡಿಸಲು ಹಾಕಿಕೊಂಡಿದ್ದರೆ ಅಲ್ಲಿಯೂ ಒಕ್ಕಲೆಬ್ಬಿಸಿದ್ದಾರೆ ಎಂದು ಅಲೆಮಾರಿ ಗೋವಿಂದಪ್ಪ ಅಳಲು ತೋಡಿಕೊಂಡರು.
ಬುಡಬುಡಿಕೆ ಸಮಾಜದ ಮುತ್ಯಾಲಮ್ಮ ಮಾತನಾಡಿ, ನಿರಾಶ್ರಿತರಾದ ನಮಗೆ ರಕ್ಷಣೆ ಇಲ್ಲದಂತಾಗಿದೆ. ಗುಡಾರ ಕಿತ್ತು ಹಾಕಿದ್ದು ಸೂಕ್ತ ನೆಲೆ ಇಲ್ಲದೆ ಮಕ್ಕಳು ಬೀದಿಯಲ್ಲಿ ವಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.
ತಾಲ್ಲೂಕು ಕೊರಚ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪ ಮಾತನಾಡಿ, ಶಾಸಕರು ಸೂಚಿಸಿದ ಸ್ಥಳದಲ್ಲಿ ಬುಡಬುಡಿಕೆ ಸಮಾಜದ ಕುಟುಂಬಗಳು ಗುಡಾರ ಹಾಕಿಕೊಂಡು ವಾಸ ಮಾಡುತ್ತಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಧ್ವಂಸಗೊಳಿಸಿರುವುದು ಅಮಾನವೀಯ ಎಂದರು.