ಅಲೆಮಾರಿ ಕುಟುಂಬಗಳಿಗೆ ಮೂಲಭೂತ ಸೌಕರ್ಯ: ಸಿಇಓ

ಕೊರಟಗೆರೆ, ನ. ೨೪- ತಾಲ್ಲೂಕಿನ ಹುಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದ ಸುಮಾರು ೨೦ ಅಲೆಮಾರಿ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.
ತಾಲ್ಲೂಕಿನ ಹುಲಿಕುಂಟೆ ಸಮೀಪ ಹಂದಿಜೋಗರು ವಾಸವಿರುವ ಸ್ಥಳಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂದಿ ಜೋಗರಿಗೆ ಈಗಾಗಲೇ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದ್ದು, ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ ವಹಿಸಲಾಗಿದೆ. ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಬೋರ್ವೆಲ್ ಕೊರೆಸಲಾಗಿದೆ. ಅಲ್ಲದೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಿಸಿ ಕೊಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಅಲೆಮಾರಿ ನಿವಾಸಿಗಳ ಮನವಿಯನ್ನು ಆಲಿಸಿದ ಅವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಮುರಾರ್ಜಿ ಅಥವಾ ಹಾಸ್ಟೆಲ್‌ಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಶಿಕ್ಷಣದ ಕಡೆ ಹೆಚ್ಚು ಒತ್ತು ನೀಡಿ, ಮಕ್ಕಳು ವಿದ್ಯಾವಂತರಾದರೆ ನಿಮ್ಮ ಜೀವನ ಮಟ್ಟ ಸುಧಾರಣೆಯಾಗುತ್ತದೆ ಎಂದ ಅವರು, ಆರೋಗ್ಯ ಕಾಪಾಡಿಕೊಂಡು ನೆಮ್ಮದಿಯ ಜೀವನ ನಡೆಸಿ ಎಂದು ಕಿವಿಮಾತು ಹೇಳಿದರು.
ಅಭಿನಂದನೆ
ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಿದ್ದಕ್ಕಾಗಿ ಜಿ.ಪಂ. ಸಿಇಒ ಡಾ. ಕೆ. ವಿದ್ಯಾಕುಮಾರಿ ಅವರನ್ನು ಅಲೆಮಾರಿ ನಿವಾಸಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಣ್ಣ ಅವರು ಇದೇ ವೇಳೆ ಅಭಿನಂದಿಸಿದರು.
ಪಿಡಿಓ ಗೈರು: ಅಸಮಾಧಾನ
ಅಲೆಮಾರಿ ವಾಸಿಗಳ ಸ್ಥಳಕ್ಕೆ ಜಿ.ಪಂ. ಸಿಇಒ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.