
ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.06: ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ, ಅಲೆಮಾರಿ ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟ, ವಿಜಯನಗರ ಜಿಲ್ಲಾ ಘಟಕ, ಶನಿವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಅಪರ ಜಿಲ್ಲಾಧಿಕಾರಿಗೆ ಜಿ.ಅನುರಾಧ ಅವರಿಗೆ ಮನವಿ ಸಲ್ಲಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಕೂಡಲೇ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆ ಆಯೋಜಿಸಬೇಕು ಎಂದು ಒತ್ತಾಯಿಸಿದರು.
ವಿಜಯನಗರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಜನರಾಗಿದ್ದಾರೆ.ಗ್ರಾಮದ ಹೊರ ವಲಯದಲ್ಲಿ ಟೆಂಟ್-ಗುಡಾರಗಳನ್ನು ನಿರ್ಮಿಸಿಕೊಂಡು ಮಳೆ,ಗಾಳಿ ಬಿಸಿಲಿಗೆ ಮೈಯೊಡ್ಡಿ ಕಠಿಣ ಜೀವನ ಮಾಡುತ್ತಿದ್ದಾರೆ.
ಕೆಲವರು ಭಿಕ್ಷಾಟನೆ ನಡೆಸಿದರೆ, ಸಣ್ಣಪುಟ್ಟ ವ್ಯಾಪಾರದಿಂದ ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಅಲೆಮಾರಿಗಳ ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಅನೇಕ ವರ್ಷಗಳಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ತೀರ ಹಿಂದುಳಿದಿದ್ದಾರೆ. ಕೂಡಲೇ ಜಿಲ್ಲೆಯ ಅಲೆಮಾರಿಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು ಹರಪನಹಳ್ಳಿ, ಹಡಗಲಿ, ಹೆಚ್.ಬಿ.ಹಳ್ಳಿ, ತಾಲೂಕುಗಳಿಗೆ ಅಲೆಮಾರಿ ಕಾಲೋನಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಬೇಕು ಎಂದು ಮನವಿ ಮಾಡಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಸಣ್ಣಮಾರೆಪ್ಪ, ವಿಜಯನಗ ಜಿಲ್ಲೆಯ ಅಲೆಮಾರಿ, ಅರೆ ಅಲೆಮಾರಿ ಜನರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಣ್ಣ ಮಾರೆಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಕಿನ್ನೂರಿ ಶೇಖಪ್ಪ, ಜೆ.ರಮೇಶ್, ಸಿದ್ದು ಬೆಳಗಲ್, ಜಿಲ್ಲಾ ಸಹಕಾರ್ಯದರ್ಶಿ ಪಕ್ಕೀರಪ್ಪ ಬಾದಿಗಿ ಇತರರು ಹಾಜರಿದ್ದರು.