ಅಲೆಮಾರಿಗಳ ಜತೆ ರೋಟರಿ ಸದಸ್ಯರ ದೀಪಾವಳಿ

ಬೀದರ್:ನ.18: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಪದಾಧಿಕಾರಿಗಳು ಇಲ್ಲಿಯ ನೌಬಾದ್ ಸಮೀಪದ ಆಟೊನಗರ ಬಳಿ ಅಲೆಮಾರಿಗಳೊಂದಿಗೆ ದೀಪಾವಳಿ ಆಚರಿಸುವ ಮೂಲಕ ಗಮನ ಸೆಳೆದರು.

ಕ್ಲಬ್ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ, ಉಪಾಧ್ಯಕ್ಷ ನಿತಿನ್ ಕರ್ಪೂರ್, ಕಾರ್ಯದರ್ಶಿ ಡಾ. ಕಪಿಲ್ ಪಾಟೀಲ, ಖಜಾಂಚಿ ಡಾ. ರಿತೇಶ ಸುಲೆಗಾಂವ್ ಹಾಗೂ ಸದಸ್ಯ ರಿಷಿಕೇಶ ಪಾಟೀಲ ಅವರು ಅಲೆಮಾರಿ ಕುಟುಂಬಗಳ ಸದಸ್ಯರ ಜತೆ ದೀಪ ಬೆಳಗಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಅಲೆಮಾರಿಗಳಿಗೆ ದೀಪಾವಳಿ ಉಡುಗೊರೆಯಾಗಿ ಸಿಹಿ ತಿನಿಸು ಹಾಗೂ ಹಣ್ಣು ಹಂಪಲು ನೀಡಿದರು. ಮಕ್ಕಳಿಗೆ ಬ್ಯಾಟ್, ಬಾಲ್ ಮತ್ತಿತರ ಆಟದ ಸಾಮಗ್ರಿಗಳನ್ನು ವಿತರಿಸಿದರು.

ಅಲೆಮಾರಿಗಳ ಮೊಗದಲ್ಲಿ ಸಂತಸ ಅರಳಿಸಲು ಅವರೊಂದಿಗೆ ಹಬ್ಬ ಆಚರಿಸಲಾಗಿದೆ ಎಂದು ಸೂರ್ಯಕಾಂತ ರಾಮಶೆಟ್ಟಿ ತಿಳಿಸಿದರು.

ರೋಟರಿ ಕ್ಲಬ್ ಅನಕ್ಷರಸ್ಥರು, ಬಡವರು, ಶೋಷಿತರ ಏಳಿಗೆಗೆ ಶ್ರಮಿಸಲಿದೆ. ಸಾಮಾಜಿಕ ಚಟುವಟಿಕೆಗಳನ್ನು ನಿರಂತರ ಮುಂದುವರಿಸಲಿದೆ ಎಂದು ಹೇಳಿದರು.

ರೋಟರಿ ಕ್ಲಬ್ ಸದಸ್ಯರು ನಮ್ಮೊಂದಿಗೆ ಹಬ್ಬ ಆಚರಿಸಿದ್ದರಿಂದ ನಮ್ಮ ಖುಷಿ ಇಮ್ಮಡಿಗೊಂಡಿದೆ. ಸಂಘ ಸಂಸ್ಥೆಗಳು ಬಡವರೊಂದಿಗೆ ಇವೆ ಎನ್ನುವ ಆತ್ಮವಿಶ್ವಾಸ ಮೂಡಿದೆ ಎಂದು ಅಲೆಮಾರಿ ಜನಾಂಗದ ಸದಸ್ಯರೊಬ್ಬರು ನುಡಿದರು.