ಅಲೆಮಾರಿಗಳಿಗೆ ಶೇ.8ರಷ್ಟು ಒಳ ಮೀಸಲು ಸಿಗಲಿ

ಸಂಜೆವಾಣಿ ನ್ಯೂಸ್
ಮೈಸೂರು: ಜ.29:- ಎಸ್ಸಿ, ಎಸ್ಟಿ ಸಮುದಾಯಕ್ಕಿಂತಲೂ ಹೆಚ್ಚಿನ ಶೋಚನೀಯ ಸ್ಥಿತಿ ಅಲೆಮಾರಿ ಹಾಗೂ ಅರೆ ಅಲೆಮಾರಿಗಳದ್ದು, ಅವರ ಏಳಿಗೆಗೆ ಈಗಿರುವ ಮೀಸಲಿನಲ್ಲಿ ಶೇ.8 ರಷ್ಟು ಮೀಸಲನ್ನು ಅಲೆಮಾರಿ ಸಮುದಾಯಕ್ಕೆ ನೀಡಬೇಕೆಂದು ಬೆಂಗಳೂರಿನ ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನದ ಡಾ.ಬಸವ ರಮಾನಂದ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಬೆಂಗಳೂರಿನ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ( ಹಿಂದುಳಿದ ಪ್ರ.ವರ್ಗ-1) ಜನಾಂಗಗಳ ಒಕ್ಕೂಟದಿಂದ ಒಕ್ಕೂಟದ ಗೌರವಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವದಲ್ಲಿ ಅವರು ಮಾತನಾಡಿದರು. ಇಂತಹ ಸಮೂಹದವನು ನಾನು ಎಂದು ಹೇಳಿಕೊಳ್ಳಲು ಹಿಂಜರಿಯುವ ಸಮುದಾಯ ಅಲೆಮಾರಿ ಸಮುದಾಯವಾಗಿದೆ ಎಂದರು. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಮುದಾಯದ ಅಭಿವೃದ್ಧಿ ಕಂಡಿಲ್ಲ. ಎಲ್ಲಿಯವರೆಗೆ ನಾವು ಒಂದೆಡೆ ನೆಲೆಸಿ ಶಿಕ್ಷಿತರಾಗುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಅಭಿವೃದ್ಧಿ ಅಸಾಧ್ಯ. ಅಲೆಮಾರಿಯ 46 ಜಾತಿಗಳಿಗೆ ಶೇ.8 ರಷ್ಟು ಮೀಸಲಾತಿ ಸಿಗದ ಹೊರತು ನಮ್ಮ ಅಭಿವೃದ್ಧಿ ಅಸಾಧ್ಯ. 2020 ಜ.25 ರವರೆಗೆ 104 ಬಾರಿ ಸಂವಿಧಾನ ತಿದ್ದುಪಡಿ ಆಗಿದೆ. ಮುಂದುವರೆದ ತಿದ್ದುಪಡಿ ಅಲೆಮಾರಿ ಸಮುದಾಯದ ಒಳಿತಿಗಾಗಿ ಆಗಬೇಕಿದೆ ಎಂದು ಹೇಳಿದರು.
ಭೂ ರಹಿತರು ಹೆಚ್ಚಿನ ಅಲೆಮಾರಿ ಆಗಿದ್ದಾರೆ. ಅಲೆ ಮಾರಿ ಜನಾಂಗದ ಕೇಂದ್ರ ಜಿಲ್ಲೆಗೊಂದು ತೆರೆಯಬೇಕು. ಸಹಿತ ಶಾಲೆಗಳನ್ನು ತಾಲ್ಲೂಕು ಕೇಂದ್ರಗಳಲ್ಲಿ ತೆರೆದಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ. ಹಿಂದಿನ ಸರ್ಕಾರ ಅಲೆಮಾರಿ ಸಮುದಾಯಕ್ಕೆ 8 ಸಾವಿರ ಮನೆ ಕೊಟ್ಟರು ಜಾಗ ಇಲ್ಲದೆ 4 ಸಾವಿರ ನಿವೇಶನ ಹಿಂದಕ್ಕೆ ಹೋದವು. ಊಟಕ್ಕೆ ತಟ್ಟೆಯನ್ನೇ ಕೊಡದೇ ರೊಟ್ಟಿ ಕೊಟ್ಟರೆ ಉಣ್ಣುವುದು ಹೇಗೆ? ಹೀಗಾಗಿ ಮನೆಗಾಗಿ ತುಂಡು ಭೂಮಿಯೂ ಇಲ್ಲದ ಸಮುದಾಯವಾಗಿದೆ ಎಂದು ಹೇಳಿದರು.
10 ವರ್ಷ ಕಳೆದರೂ ನಿಗಮದ ಮೂಲಕ ಹಸು, ಕುರಿ ಹಾಗೂ ಕರುವಿನ ಮರಣದ ಪರಿಹಾರ ಸಿಗುತ್ತಿಲ್ಲ. ಇದೆಲ್ಲದರ ನಡುವೆ ಒಣಕಲ್ ಮಠ ಬಡತನದ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ನೀಡಲಾಗುತ್ತಿದೆ. ಸರ್ಕಾರದಿಂದ ವೃತ್ತಿಪರ ಶಿಕ್ಷಣ ಕೊಡುವ ಕೆಲಸ ಆಗಬೇಕಿದೆ. ಕಂಬಾರಿಕೆ, ಕುಂಬಾರಿಗೆ ಕುರಿ ಸಾಗಾಣಿಕೆ ಮೊದಲಾದವುಗಳ ಮಾಡಲು ವೃತ್ತಿಪರ ಶಿಕ್ಷಣ ಕೊಡುವ ಕೆಲಸ ಆಗಬೇಕಿದೆ ಎಂದರು.
ಚಿತ್ರದುರ್ಗದ ಶ್ರೀ ಮುರುಘ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಸಣ್ಣ ಸಣ್ಣ ಸಮುದಾಯಗಳನ್ನು ಜಾತಿಗಣತಿ ವರದಿ ಮಾಡುವ ಮಂದಿ ನೋಡದಿರುವುದು ಬಹುದೊಡ್ಡ ಬೇಸರದ ಸಂಗತಿ. ಹೀಗಾಗಿ ಪ್ರತಿ ಜಿಲ್ಲೆಯಲ್ಲೂ ಸಮಾವೇಶ ಮಾಡಿ, ಬೆಂಗಳೂರಿನಲ್ಲಿ ದೊಡ್ಡ ಸಮಾವೇಶ ಮಾಡಿ. ನಿಮ್ಮ ಎಲ್ಲಾ ಹೋರಾಟಕ್ಕೆ ಮುರುಘಾ ಮಠ ಜತೆಗೆ ಇರಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಕ್ರೀಡಾಪಟು ಅಂಕಿತ ಎಳವರ್ ಸನ್ಮಾನ ಸ್ವೀಕರಿಸಿ ಮಾತನಾಡಿ, 46 ಜಾತಿಗಳಲ್ಲಿ ಗೊಲ್ಲ, ಹೆರವ, ಬುಡಬುಡುಗಿ, ಹಾವಾಡಿಗೆ ಮೊದಲಾದವು ಬರುತ್ತವೆ. ಸರ್ಕಾರದಿಂದ ಅರಿವು ಕಾರ್ಯಕ್ರಮಕ್ಕೆ 15 ಸಾವಿರ ಕೊಟ್ಟು ನಮ್ಮನ್ನು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುನ್ನಲೆಗೆ ತರುವ ಪ್ರಯತ್ನ ನಡೆಯುತ್ತಿದೆ. ಗುಲ್ಬರ್ಗದಲ್ಲಿ ಸಾಕಷ್ಟು ಸೌಲಭ್ಯವನ್ನು ಪಡೆದುಕೊಂಡಿದ್ದು, ಅಂತೆಯೇ ಇಡೀ ರಾಜ್ಯದಲ್ಲಿಯೂ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಭಿಕ್ಷಾಟನೆ ಬಿಟ್ಟು ಬಿಸಿ ಅಕ್ಕಿ ತಿನ್ನುವ ಜಾಗೃತಿ ಮೂಡಲಿ ಎಂದು ಹೇಳಿದರು.
ಬಳಬಟ್ಟಿಯ ಶ್ರೀ ಗೋರಾಕ್ಷನಾಥ ಮಠದ ಶ್ರೀ ಜಿ.ಯೋಗಿ ನಿವೃತ್ತನಾಥ್, ಬೆಂಗಳೂರಿನ ಶ್ರೀ ಗುರು ರಂಗಸ್ವಾಮಿ ಆಶ್ರಮ ದೊಂಬಿ ದಾಸರ ಸಮುದಾಯದ ವಿದ್ವಾನ್ ಶ್ರೀ ಕರುಣಾಕರಸ್ವಾಮಿ ತುಮಕೂರಿನ ಶ್ರೀ ಬಸವ ಬೃಂಗೇಶ್ವರ ಮಹಾಮಠದ ಶ್ರೀ ಬಸವ ಬೃಂಗೇಶ್ವರ ಸ್ವಾಮೀಜಿ, ಒಕ್ಕೂಟದ ಅಧ್ಯಕ್ಷ ಎಂ.ಪ್ರಕಾಶ್, ಪ್ರದಾನ ಕಾರ್ಯದರ್ಶಿ ಪ್ರತಾಪ್ ಒ.ಜೋಗಿ, ಕೋಶಾಧಿಕಾರಿ ಹುಲ್ಲಪ್ಪ ಅಪ್ಪಣ್ಣ ಜಾಡರ್, ಉಪಾಧ್ಯಕ್ಷರಾದ ಬಿ.ವಿ.ಚಂದ್ರಯ್ಯ, ಮಹಿಳಾ ಘಟಕದ ರಾಜ್ಯಾದ್ಯಕ್ಷೆ ಚೈತ್ರ, ಯುವ ಘಟಕದ ಅಧ್ಯಕ್ಷ ಸಚಿನ್ ದಳವಾಯಿ, ಕಾರ್ಯಾಧ್ಯಕ್ಷ ಶಂಕರ್ ಹೆಬ್ಬಳ್ಳಿ, ತಿಪ್ಪಣ್ಣ ಹೆಳವ ಇನ್ನಿತರರು ಉಪಸ್ಥಿತರಿದ್ದರು.