ಅಲೆಮನೆಗೆ ಆಕಸ್ಮಿಕ ಬೆಂಕಿ, ಲಕ್ಷಾಂತರ ರೂ. ನಷ್ಟ

ಚಾಮರಾಜನಗರ, ಸೆ.13:- ಕಿಡಿಗೇಡಿಗಳ ಕೃತ್ಯಕ್ಕೆ ಆಲೆಮನೆಯೊಂದು ಧಗಧಗಿಸಿ ಹೊತ್ತಿ ಉರಿದ ಘಟನೆ ಚಾಮರಾಜನಗರ ತಾಲೂಕಿನ ದೊಡ್ಡಮೋಳೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ದೊಡ್ಡಮೋಳೆ ಗ್ರಾಮದ ಸಮೀಪ ಜಮೀನಿನಲ್ಲಿ ನೂತನವಾಗಿ ನಿರ್ಮಿಸಿದ್ದ ಅಲೆಮನೆಗೆ ಆಕಸ್ಮಿಕ ಬೆಂಕಿ ಬಿದ್ದು ಹತ್ತಿರದಲ್ಲಿ ಇದ್ದ ಬಾಡಿಗೆ ಟ್ರಾಕ್ಟರ್, ಕೃಪಿ ಉಪಕರಣಗಳು ಹಾಗೂ ಮರದ ಸಾಮಾನುಗಳು ಸಂಪೂರ್ಣ ಸುಟ್ಟು ಹೋಗಿದೆ.
ಗ್ರಾಮದ ನಿವಾಸಿ ಸಿದ್ದಶೆಟ್ಟಿ ಅವರಿಗೆ ಸೇರಿದ ಜಮೀನಿನಲ್ಲಿ ನಿರ್ಮಿಸಿದ್ದ ಆಲೆಮನೆ ಸೇರಿದಂತೆ ಬಾಡಿಗೆ ಟ್ರಾಕ್ಟರ್, ಹುಲ್ಲಿನ ಮೆದೆ ಹಾಗೂ ಅಪಾರ ಪ್ರಮಾಣದ ಸಾಮಗ್ರಿಗಳು ಹಾನಿಯಾಗಿದ್ದು, ಸುಮಾರು 14 ಲಕ್ಷ ರೂ ಹೆಚ್ಚು ನಷ್ಟವಾಗಿದೆ ಎಂದು ರಾಮಸಮುದ್ರ ಪೂರ್ವ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸಿದ್ದಶೆಟ್ಟಿ ಅವರು ಗ್ರಾಮದ ಹೊರ ವಲಯದಲ್ಲಿರುವ ತಮಗೆ ಸೇರಿದ ಸರ್ವೆ ನಂ 13ರಲ್ಲಿ 2.07 ಪ್ರದೇಶದಲ್ಲಿ ಆಲೆಮನೆ ಹಾಗೂ ನಿರ್ಮಾಣ ಮಾಡಿಕೊಂಡಿದ್ದರು.
ಇಲ್ಲಿಯೇ ಬಾಡಿಗೆ ಟ್ರಾಕ್ಟರ್, ಡಿಸೇಲ್ ಇಂಜಿನ್, ಗಾಣ, ಪಿಯುಸಿ ಪೈಪ್, ಕೊಪ್ಪರಿಕೆ ಮರದ ಹಚ್ಚುಗಳು, ಹಾಗು ಹೊಸ ಮನೆ ಕಟ್ಟಲು ಮರದ ಸಾಮಾಗ್ರಿಗಳನ್ನು ದೊಡ್ಡದ ಆಲೆಮನೆಯಲ್ಲಿಯೇ ಸಂಗ್ರಹಿಸಿ ಇಡಲಾಗಿತ್ತು. ಅಂದು ರಾತ್ರಿ ಅವರು ತಮ್ಮ ಪಕ್ಕದ ತೋಟಕ್ಕೆ ಹೋಗಿ ಮಲಗಿದ್ದರು, ರಾತ್ರಿ ಆಕಸ್ಮಿಕ ಬಿದ್ದು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಗ್ರಾಮದ ರಂಗಸ್ವಾಮಿ ಬೆಳಗಿನ ಜಾವ 5 ಗಂಟೆಯಲ್ಲಿ ಕರೆ ಮಾಡಿ, ಅಲೆಮನೆ ಸುಟ್ಟು ಹೋಗಿರುವ ವಿಷಯ ತಿಳಿಸಿದ್ದಾರೆ. ತಕ್ಷಣ ತೋಟದ ಮನೆಯಿಂದ ಸ್ಥಳಕ್ಕೆ ಬರುವಷ್ಟರಲ್ಲಿ ಎಲ್ಲವು ಸಹ ಸುಟ್ಟು ಹೋಗಿತ್ತು ಎಂದು ರಾಮಸಮುದ್ರ ಪೋಲಿಸ್ ಠಾಣೆಗೆ ಸಿದ್ದಶೆಟ್ಟಿ ಅವರು ದೂರು ನೀಡಿದ್ದಾರೆ. ಪೊಲೀಸರು ಸಹ ಸ್ಥಳಕ್ಕೆ ತೆರಳಿ ಸ್ಥಳ ಮಹಜರು ನಡೆಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಬೆಂಕಿ ಅವಘಡದ ಮಾಹಿತಿ ಅರಿತ ಚಾಮರಾಜನಗರ ಅಗ್ನಿಶಾಮಕ ದಳದ ರಾಮಚಂದ್ರಮೂರ್ತಿ ಮತ್ತು ತಂಡ ಎರಡು ತಾಸು ಕಾರ್ಯಾಚರಣೆ ಕೈಗೊಂಡು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಸೂಕ್ತ ಪರಿಹಾರಕ್ಕೆ ಒತ್ತಾಯ:
ಸಿದ್ದಶೆಟ್ಟಿ ಬಡ ರೈತನಾಗಿದ್ದು, ಸಾಲ ಮಾಡಿ, ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದರು. ಈಗ ಅಲೆಮನೆ ಸೇರಿದಂತೆ ಎಲ್ಲವು ಸುಟ್ಟು ಹೋಗಿದ್ದು, ಸುಮಾರು 14 ಲಕ್ಷ ನಷ್ಟವಾಗಿದೆ. ಬಾಡಿಗೆ ಪಡೆದುಕೊಂಡಿದ್ದ ಟ್ರಾಕ್ಟರ್ ಸುಟ್ಟು ಹೋಗಿದೆ. ಹೀಗಾಗಿ ಇಡೀ ಕುಟುಂಬವೇ ಕೂಲಿ ಕಾರ್ಮಿಕರಾಗಿ ಬದುಕು ರೂಪಿಸಿಕೊಳ್ಳುತ್ತಿದ್ದರು. ಈಗ ಘಟನೆಯಿಂದ ಚಿಂತಾಕ್ರಾತವಾಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ವಿಶೇಷ ಪರಿಹಾರ ನೀಡಬೇಕೆಂದು ಜಿಲ್ಲಾ ಅಭಿವೃದ್ದಿ ಹೋರಾಟ ಸಮಿತಿಯ ಅಧ್ಯಕ್ಷ ಕೆ. ವೀರಭದ್ರಸ್ವಾಮಿ ಒತ್ತಾಯಿಸಿದ್ದಾರೆ.