ಅಲೆಕ್ಸ್ಕಿಯ ರಹಸ್ಯ ಅಂತ್ಯಕ್ರಿಯೆಗೆ ತಾಯಿ ಮೇಲೆ ಒತ್ತಡ

ಮಾಸ್ಕೋ, ಫೆ.೨೩- ರಷ್ಯಾದ ಸಾಮಾಜಿಕ ಹೋರಾಟಗಾರ ಅಲೆಕ್ಸ್ಕಿ ನವಾಲ್ನಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಸಂಗತಿ ಹೊರಹೊಮ್ಮಿದೆ. ನನಗೆ ಮೃತದೇಹವನ್ನು ತೋರಿಸಲಾಗಿದ್ದು, ಆದರೆ ರಷ್ಯಾ ಅಧಿಕಾರಿಗಳು ರಹಸ್ಯ ಸಮಾಧಿಗೆ ಅವಕಾಶ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೆ ಅಧಿಕಾರಿಗಳು ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಲೆಕ್ಸ್ಕಿ ತಾಯಿ ಲ್ಯುಡ್ಮಿಲಾ ನವಲ್ನಾಯಾ ಆರೋಪಿಸಿದ್ದಾರೆ.
ವಿಡಿಯೋ ಸಂದೇಶದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ನವಲ್ನಾಯಾ, ನನ್ನನ್ನು ರಷ್ಯಾ ಅಧಿಕಾರಿಗಳು ಶವಾಗಾರಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಮರಣಪತ್ರಕ್ಕೆ ಸಹಿ ಹಾಕಿಸಿದ್ದಾರೆ. ನನ್ನ ಮಗನ ಶವವನ್ನು ಹಸ್ತಾಂತರಿಸಲು ಕಾನೂನಿನ ಅಗತ್ಯವಿದೆ. ಆದರೆ ಅವರು ಅದನ್ನು ಮಾಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ನನ್ನನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಅಧಿಕಾರಿಗಳು ತನ್ನ ಮಗನ ಸಮಾಧಿ ಸ್ಥಳ, ಸಮಯ ಮತ್ತು ಸಮಾಧಿ ಮಾಡುವ ವಿಧಾನವನ್ನು ಒಳಗೊಂಡಂತೆ ಸಮಾಧಿಗೆ ಷರತ್ತುಗಳನ್ನು ಹಾಕುತ್ತಿದ್ದಾರೆ. ಸ್ಮಶಾನಕ್ಕೆ ಕರೆದುಕೊಂಡು ಹೋಗಿ, ಹೊಸತಾಗಿ ನಿರ್ಮಿಸಿದ ಸಮಾಧಿಯತ್ತ ತೋರಿಸಿ, ಇದೇ ನಿಮ್ಮ ಮಗನ ಸಮಾಧಿ ಎಂದು ಹೇಳಲು ಬಯಸುತ್ತಿದ್ದಾರೆ. ಒಂದು ವೇಳೆ ರಹಸ್ಯ ಅಂತ್ಯಕ್ರಿಯೆಗೆ ಒಪ್ಪದಿದ್ದರೆ, ನನ್ನ ಮಗನ ಶವದೊಂದಿಗೆ ಏನಾದರೂ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ. ಸಮಯವು ನಿಮ್ಮ ಪರವಾಗಿಲ್ಲ, ಶವವು ಕೊಳೆಯುತ್ತಿದೆ ಎಂದು ತನಿಖಾಧಿಕಾರಿಗಳು ತನಗೆ ಹೇಳಿರುವುದಾಗಿ ನವಲ್ನಾಯ ತಿಳಿಸಿದ್ದಾರೆ. ಮಗ ಅಲೆಕ್ಸ್ಕಿಯವರ ನಿಧನದ ಬಳಿಕ ನವಲ್ನಾಯ ಅವರು ಆರು ದಿನಗಳ ಹಿಂದೆ ಉತ್ತರ ರಷ್ಯಾದ ಪಟ್ಟಣವಾದ ಸಲೇಖಾರ್ಡ್‌ಗೆ ಪ್ರಯಾಣ ಬೆಳೆಸಿದ್ದರು.