ಅಲಂಕೃತ ನೂರಾರು ಎತ್ತಿನ ಬಂಡಿಗಳ ಮೆರವಣಿಗೆ


ಬಳ್ಳಾರಿ,ಜ.20 :  ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ  ಬಳ್ಳಾರಿ ಉತ್ಸವದ ಅಂಗವಾಗಿ ಕೃಷಿ ಮಾರುಕಟ್ಟೆ (ಎಪಿಎಂಸಿ) ಆವರಣದಿಂದ ಮುನಿಸಿಪಲ್ ಮೈದಾನದವರೆಗೆ ಗುರುವಾರ ಹಮ್ಮಿಕೊಂಡಿದ್ದ ನೂರಾರು ಅಲಂಕೃತ ಎತ್ತಿನ ಗಾಡಿಗಳ ಮೆರವಣಿಗೆಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಚಾಲನೆ ನೀಡಿದರು.
ಎತ್ತಿನ ಬಂಡಿ ಉತ್ಸವದಲ್ಲಿ ಶ್ರೀಧರಗಡ್ಡೆ, ಲಕ್ಷ್ಮೀನಗರ ಕ್ಯಾಂಪ್, ಕೊಳಗಲ್, ಸಂಜೀವರಾಯನ ಕೋಟೆ, ಚೆರಕುಂಟೆ ಹಾಗೂ ನೆರೆಯ ಆಂಧ್ರಪ್ರದೇಶದ ನಾನಾ ಗ್ರಾಮಗಳ ಸೇರಿದಂತೆ ತಳಿರು ತೋರಣಗಳಿಂದ ಸಿಂಗಾರಗೊಂಡ 100 ಕ್ಕೂ ಅಧಿಕ ಎತ್ತಿನ ಬಂಡಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು.
*ಸಿಂಗಾರದ ಎತ್ತಿನ ಬಂಡಿಗಳು;* ಎತ್ತಿನ ಬಂಡಿಗಳಿಗೆ ನಾನಾ ಹೂ, ತಳಿರು ತೋರಣ, ರಾಷ್ಟ್ರೀಯ ಐಕ್ಯತೆ ಸಾರುವ ಹಾಗೂ ನಾಡಿನ ಮೆರಗನ್ನು ಸಾರುವ ಬಾವುಟ, ವಿವಿಧ ಬಣ್ಣದ ಬಲೂನ್‍ಗಳ ಮೂಲಕ ಸಿಂಗಾರಗೊಳಿಸಲಾಗಿತ್ತು. ಇದಲ್ಲದೇ, ಸದೃಢ ಆರೋಗ್ಯಕ್ಕಾಗಿ ಸಿರಿಧಾನ್ಯದ ಅರಿವು ಮೂಡಿಸುವ ಹಾಗೂ ಕೃಷಿ ಇಲಾಖೆಯ ಮಾಹಿತಿಯುಳ್ಳ ಬ್ಯಾನರ್‍ಗಳನ್ನು ಬಂಡಿಗಳಿಗೆ ಹಾಕಲಾಗಿತ್ತು. ಪ್ರತಿಯೊಂದು ಎತ್ತುಗಳ ದೇಹದ ಮೇಲೆ ನೀಲಿ ಹಾಗೂ ಕೆಂಪು ಬಣ್ಣಗಳಿಂದ ನಾನಾ ಚಿತ್ರಗಳನ್ನು ಬಿಡಿಸಲಾಗಿತ್ತು. ಎತ್ತುಗಳ ಕೊರಳಲ್ಲಿ ಗೆಜ್ಜೆಯ ಸರ, ನಾನಾ ಬಣ್ಣದ ಹಣೆಯ ಮೇಲೆ ಗಂಡೇವು ಕಟ್ಟಲಾಗಿತ್ತು. ಪ್ರತಿಯೊಬ್ಬ ರೈತರು ಎತ್ತಿನ ಬಂಡಿ ಓಡಿಸುವವರು ಹಸಿರುಪೇಟ ತೊಟ್ಟಿದ್ದು ವಿಶೇಷವಾಗಿತ್ತು.
*ಗಮನಸೆಳೆದ ಮಾಹಿತಿ ಬ್ಯಾನರ್‍ಗಳು; ಎತ್ತಿನ ಬಂಡಿ ಉತ್ಸವದಲ್ಲಿ ಎತ್ತಿನ ಬಂಡಿಗಳಲ್ಲಿ ಸಾವಯವ ಕೃಷಿ ಪದ್ಧತಿಗಳ ಅರಿವು ಮೂಡಿಸುವ ಬ್ಯಾನರ್, ಸಿರಿಧಾನ್ಯ ಬಳಕೆಯ ಮಹತ್ವ ಕುರಿತ ಬ್ಯಾನರ್‍ಗಳು, ಮತದಾನದ ಜಾಗೃತಿ ಮೂಡಿಸುವ ಬ್ಯಾನರ್‍ಗಳು ಮತ್ತು ಸಿರಿಧಾನ್ಯ ಬಳಕೆಯ ಸ್ಲೋಗನ್‍ಗಳ ಬ್ಯಾನರ್‍ಗಳು ಆಳವಡಿಸಿದ್ದು ನೋಡುಗರನ್ನು ಗಮನ ಸೆಳೆದವು.
*ಗಮನ ಸೆಳೆದ ಕಲಾ ತಂಡಗಳು;* ಎತ್ತಿನ ಬಂಡಿ ಉತ್ಸವದಲ್ಲಿ ಕಲಾ ತಂಡಗಳಾದ ಡೊಳ್ಳು ಬಾರಿಸುವಿಕೆ, ಕಹಳೆ ಉದುವಿಕೆ, ಹುಲಿಕುಣಿತ, ಎತ್ತರದ ಮಾನವನ ನಡಿಗೆ ಸೇರಿದಂತೆ ಹಲವು ಕಲಾ ತಂಡಗಳು ಭಾಗವಹಿಸಿ ಕಲೆ ಪ್ರದರ್ಶಿಸಿದರು. ಮೆರವಣಿಗೆಯ ರಸ್ತೆಯ ಉದ್ದಕ್ಕೂ ಸಾರ್ವಜನಿಕರು ಹಾಗೂ ವಾಹನ ಸವಾರರು ಮೊಬೈಲ್ ಹಿಡಿದು ವಿಡಿಯೋ ಮಾಡುವ ಮೂಲಕ ಸಂಭ್ರಮಿಸಿದರು. ನಾನಾ ರೀತಿಯ ಎತ್ತುಗಳು ಕಂಡು ಕೆಲವರು ಕೇಕೆ ಹಾಕುತ್ತ ಬಂಡಿಯಿಂದ ಓಡುತ್ತಿದ್ದರು. ನಾ ಮುಂದು ತಾ ಮುಂದು ಎನ್ನುವಂತೆ ಎತ್ತಿನ ಬಂಡಿಗಳು ಓಡಿಸಿದರು.
ಉತ್ಸವದ ಚಾಲನೆಗೆ ಮುನ್ನ ಎಲ್ಲ ಅಧಿಕಾರಿಗಳು ರೈತರ ಹಸಿರು ಶಾಲಿನ ಪೇಟತೊಟ್ಟು ಮೆರವಣಿಗೆಯಲ್ಲಿ ಗಮನಸೆಳೆದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿ.ಪಂ ಸಿಇಒ ಜಿ.ಲಿಂಗಮೂರ್ತಿ, ಸಹಾಯಕ ಆಯುಕ್ತ ಹೇಮಂತ್ ಕುಮಾರ, ಎಡಿಸಿ ಪಿ.ಎಸ್. ಮಂಜುನಾಥ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ, ಎಪಿಎಂಸಿ ಅಧ್ಯಕ್ಷ ಬಸವಲಿಂಗಪ್ಪ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.
ಈ ಮೆರವಣಿಗೆಯು ಕೃಷಿ ಮಾರುಕಟ್ಟೆ (ಎಪಿಎಂಸಿ)ಯಿಂದ ಆರಂಭವಾಗಿ ಮೋತಿ ವೃತ್ತ, ಎಸ್‍ಪಿ ಸರ್ಕಲ್  ಮಾರ್ಗವಾಗಿ ದುರುಗಮ್ಮ ದೇವಸ್ಥಾನದಿಂದ ಮುನಿಸಿಪಲ್ ಮೈದಾನದವರೆಗೆ ತಲುಪಿತು.
ಅತ್ಯುತ್ತಮವಾಗಿ ಸಿಂಗಾರಗೊಂಡ ಎತ್ತಿನ ಬಂಡಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತಿಯ ಬಹಮಾನ ನೀಡಲಾಯಿತು.