ಅರ್ಹ ಫಲಾನುಭವಿಗಳಿಗೆ ಮನೆಹಂಚಿಕೆ ಮಾಡಿ

ದೇವದುರ್ಗ.ಡಿ.೨೧- ತಾಲೂಕಿನ ಮಸರಕಲ್ ಗ್ರಾಮದಲ್ಲಿ ವಿವಿಧ ವಸತಿ ಯೋಜನೆಯಡಿ ಅನರ್ಹ ಫಲಾನುಭವಿಗಳನ್ನು ರದ್ದು ಮಾಡಿ, ಗ್ರಾಮಸಭೆ ನಡೆಸುವ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿ ಪಿಡಿಒ ಹನುಮಂತಗೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಗುರುವಾರ ಮನವಿ ಸಲ್ಲಿಸಿತು.
ವಿವಿಧ ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ಹಂಚಿಕೆ ಮಾಡಲು ಮಸರಕಲ್ ಗ್ರಾಪಂಯಲ್ಲಿ ಡಿ.೧೮ ಕ್ಕೆ ಗ್ರಾಮಸಭೆ ನಡೆಸಲಾಗಿದೆ. ಗ್ರಾಮಸ್ಥರ ದೂರು, ಅರ್ಜಿ ಆಲಿಸದೆ ಏಕಪಕ್ಷೀಯವಾಗಿ ಹಾಗೂ ರಾಜಕೀಯ ಒತ್ತಡಕ್ಕೆ ಒಳಗಾಗಿ ಪ್ರಭಾವಿಗಳಿಗೆ ಮನೆಗಳನ್ನು ಹಂಚಲಾಗಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಅನರ್ಹರ ಆಯ್ಕೆಯಲ್ಲಿ ರಾಜಕೀಯ ಪ್ರಭಾವ ಬೀರಿದೆ ಎಂದು ದೂರಿದರು.
ಕೂಡಲೇ ಸದ್ಯ ಮಾಡಿರುವಂಥ ಅನರ್ಹ ಫಲಾನುಭವಿಗಳ ಪಟ್ಟಿಯನ್ನು ರದ್ದು ಮಾಡಬೇಕು. ಮತ್ತೊಮ್ಮೆ ಗ್ರಾಮಸಭೆ ಕರೆದು ಅರ್ಜಿ ಸ್ವೀಕರಿಸಿ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಬೇಕು. ಬಡವರು, ನಿರಾಶ್ರಿತರಿಗೆ ಮನೆಗಳನ್ನು ಹಂಚಿಕೆ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಗ್ರಾ.ಪಂ. ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಮ ಘಟಕದ ಅಧ್ಯಕ್ಷ ಮಹಾಂತೇಶ, ಕಾರ್ಯದರ್ಶಿ ಗಂಗಾಧರ, ಪ್ರಭು ಹಿರೇಮಠ, ಲಿಂಗಣ್ಣ ಮಕಾಶಿ ಇತರರಿದ್ದರು.