ಅರ್ಹ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸವಲತ್ತು ದೊರಕಲಿ


ಹರಪನಹಳ್ಳಿ.ನ.೧೯; ಕಾರ್ಮಿಕರ ಕಲ್ಯಾಣ ಮಂಡಳಿ ಸವಲತ್ತು ಅರ್ಹರಿಗೆ ದೊರೆತಾಗ ಮಾತ್ರ ಹೋರಾಟಕ್ಕೆ ನಿಜ ಪ್ರತಿಫಲ ಸಿಕ್ಕಂತಾಗುತ್ತದೆ ಎಂದು ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಚ್.ಜಿ. ಉಮೇಶ್ ಅಭಿಪ್ರಾಯಪಟ್ಟರು.ಪಟ್ಟಣದ ನಟರಾಜ ಕಲಾಭವನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.32 ವಿಭಾಗದ ಅಸಂಘಟಿತ ಕಾರ್ಮಿಕರ ಹೋರಾಟದ ಫಲವಾಗಿ ಅಂದಿನ ಪ್ರಧಾನಿ ದೇವೇಗೌಡ ಅವರು ಇಂದ್ರಜಿತ್ ಗುಪ್ತ ಅವರ ನೇತೃತ್ವದಲ್ಲಿ ಕಾರ್ಮಿಕ ಕಾಯ್ದೆ ತಿದ್ದುಪಡಿ ಮೂಲಕ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪಿಸಿದರು ಎಂದು ಹೇಳಿದರು.ದಾವಣಗೆರೆ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯಿರಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಸಂಘಟನೆಗಳು ಕೈಚೆಲ್ಲಿ ಕುಳಿತಾಗ ಎಐಟಿಯುಸಿ ಅಂತಹ ವಿಷಮ ಪರಿಸ್ಥಿತಿಯಲ್ಲಿ ಕಾರ್ಮಿಕರ ಪರ ಧ್ವನಿ ಎತ್ತುವ ಮೂಲಕ ದುಡಿಯುವ ವರ್ಗದ ಪರವಾಗಿ ನಿಂತಿದೆ. ಸಮ ಸಮಾಜ ನಿರ್ಮಾಣ ಆಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.ಬಳ್ಳಾರಿ ಜಿಲ್ಲಾಧ್ಯಕ್ಷ ಆದಿಮೂರ್ತಿ ಮಾತನಾಡಿ, ಕಟ್ಟಡ ಕಾರ್ಮಿಕರು ರಾಜಕೀಯವಾಗಿ ಮುಂದೆ ಬರುವ ಅಗತ್ಯವಿದೆ ಎಂದರು.
ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂಪಿ ವೀಣಾ, ಎಐಕೆಎಸ್ ರಾಜ್ಯ ಉಪಾಧ್ಯಕ್ಷ ಹೊಸಳ್ಳಿ ಮಲ್ಲೇಶ್ ಮಾತನಾಡಿದರು. ಸಮ್ಮೇಳನದಲ್ಲಿ ನಟರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.
ಸಿಪಿಐ ಹಿರಿಯ ಮುಖಂಡ ಕೆ.ಎಸ್. ಹಡಗಲಿ ಮಠ್. ಪಿ.ಕೆ ನಿಂಗಪ್ಪ, ಹೆಚ್.ಎಂ. ಸಂತೋಷ, ಹಲಗಿ ಸುರೇಶ್, ರಮೇಶ್ ನಾಯ್ಕ್, ಸುಮಾ, ಅಂಜಿನಪ್ಪ, ಬಿ. ಚೆನ್ನಾಪ್ಪಚಾರಿ, ವೀರಣ್ಣ, ಕೊಟ್ರೇಶ್, ಮಾದಿಹಳ್ಳಿ ಮಂಜಪ್ಪ, ಟಿ. ಬಸಮ್ಮ, ಮಂಜುಳಾ, ಪುಷ್ಪಾ, ವಿಶಾಲಮ್ಮ, ಪದ್ಮಪ್ರಸಾದ, ಬಿ. ರಾಮಕೃಷ್ಣ, ಟಿ.ಎಂ. ಕೊಟ್ರಯ್ಯ ಮತ್ತಿತರರಿದ್ದರು.