ಅರ್ಹರು ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ

ಕಲಬುರಗಿ : ನ.9:ಯಾವುದೇ ಒಂದು ರಾಷ್ಟ್ರದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನ ತುಂಬಾ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವಾಗಿದ್ದು, ಎಲ್ಲರೂ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಯಾರೂ ಕೂಡಾ ಮತದಾನದಿಂದ ದೂರ ಉಳಿಯಬಾರದು ಎಂಬ ಉದ್ದೇಶದಿಂದ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ಜರುಗುತ್ತಿದ್ದು, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ವ್ಯಕ್ತಿಗಳು ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಗ್ರೇಡ್-2 ತಹಶೀಲ್ದಾರ ಪ್ರಸನ್ನ ಕುಮಾರ ತಿಳಿಸಿದರು.

  ಜೇವರ್ಗಿಯ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ್ ಮತ್ತು ಬಸವೇಶ್ವರ ವೃತ್ತದ ಬಳಿಯಿರುವ ಸರ್ಕಾರಿ ಪಿಯು ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಬುಧವಾರ ಜರುಗಿದ ‘ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಜಾಗೃತಿ ಜಾಥಾ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಕಾಲೇಜಿನ ಉಪನ್ಯಾಸಕ, ಎನ್.ಎಸ್.ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ಕಡ್ಡಾಯ ಮತ್ತು ಪ್ರತಿಶತ ಪ್ರಮಾಣದ ಮತದಾನ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಲಿಷ್ಠತೆಗೆ ಪೂರಕವಾಗಿದೆ. ಜೊತೆಗೆ ರಾಷ್ಟ್ರ ಅಭಿವೃದ್ಧಿಯಾಗಲು ಸಾಧ್ಯವಿದೆ. ಆದ್ದರಿಂದ ಯಾವುದೇ ವ್ಯಕ್ತಿ ಕೂಡಾ ಮತದಾನದಿಂದ ದೂರ ಉಳಿಯಬಾರದು. ಮತದಾರರ ಪಟ್ಟಿಯಲ್ಲಿ ಏನಾದರೂ ಬದಲಾವಣೆಯಿದ್ದರೆ ಪರಿಷ್ಕರಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
     ಜಾಥಾದಲ್ಲಿ ತಹಶೀಲ್ ಕಚೇರಿಯ ಸಿರಸ್ತೆದಾರ ಟಿಪ್ಪು ಸುಲ್ತಾನ, ತಾಲೂಕಾ ಪಂಚಾಯತ್ ಕಚೇರಿಯ ವ್ಯವಸ್ಥಾಪಕ ಸುಭಾಷ ಹೊಸಮನಿ, ಐಇಸಿ ಸಂಯೋಜಕ ಚಿದಂಬರ್ ಪಾಟೀಲ, ಕೆಲ್ಲೂರ್ ಗ್ರಾ.ಪಂ. ಪಿಡಿಓ ಪ್ರಕಾಶ ಬಾಬು, ಕಾಲೇಜಿನ ಉಪನ್ಯಾಸಕರಾದ ರವೀಂದ್ರಕುಮಾರ ಬಟಗೇರಿ, ಶಂಕ್ರೆಪ್ಪ ಹೊಸದೊಡ್ಡಿ ಹಾಗೂ ತಹಶೀಲ್ ಕಚೇರಿ, ತಾ.ಪಂ. ಸಿಬ್ಬಂದಿ ಮತ್ತು ಕಾಲೇಜಿನ ಸಿಬ್ಬಂದಿ, ಎನ್.ಎಸ್.ಎಸ್ ಸ್ವಯಂ ಸೇವಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.