ಅರ್ಹರಿಗೆ ಮಾಸಾಶನ ತಲುಪಿಸಲು ಶ್ರಮವಹಿಸಿ-ಆರ್.ಅಶೋಕ್

ರಾಯಚೂರು.ಸೆ.17- ಬಡವರಿಗೆ, ಅಸಹಾಯಕರಿಗೆ, ವಿಧವೆಯರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರ ನೀಡುವ ವಿವಿಧ ರೀತಿಯ ಮಾಸಾಶನಗಳನ್ನು ಅರ್ಹರಿಗೆ ತಲುಪಿಸಲು ಅಧಿಕಾರಿಗಳು ಗಮನ ಹರಿಸಬೇಕೆಂದು ಕಂದಾಯ ಸಚಿವ ಆರ್.ಅಶೋಕ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧುವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ವಿವಿಧ ಮಾಸಾಶನಗಳಿಗೆ ಸರ್ಕಾರ ಪ್ರತಿವರ್ಷ 7 ಸಾವಿರ ಕೋಟಿ ರೂ. ಹಣವನ್ನು ಮೀಸಲಿರಿಸಿದೆ. ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳಡಿ ಜಿಲ್ಲೆಯ 2.42 ಲಕ್ಷಕ್ಕೂ ಹೆಚ್ಚಿನ ಪಿಂಚಿಣಿದಾರರಿದ್ದು, ಅವರೆಲ್ಲರ ಆಧಾರ್ ಲಿಂಕ್‌ನ್ನು ಮುಂದಿನ ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಸಚಿವರು, ಇದರಿಂದ ಬೋಗಸ್ ಪಿಂಚಣಿದಾರರನ್ನು, ಅವ್ಯವಹಾರ ಹಾಗೂ ಮೋಸವನ್ನು ತಡೆಗಟ್ಟಬಹುದು ಎಂದರು.
60 ವರ್ಷ ಪೂರ್ಣಗೊಂಡು ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ಪಿಂಚಣಿ ಪಡೆಯಲು ಅರ್ಹರಿರುವ ಹಿರಿಯ ನಾಗರೀಕರನ್ನು ಗುರುತಿಸಿ ಸ್ವಯಂ ಪ್ರೇರಿತರಾಗಿ ಅವರಿಂದ ಅರ್ಜಿ ಪಡೆದು ಮಾಸಶಾಸನವನ್ನು ನೀಡಲು ಜಿಲ್ಲೆಯಲ್ಲಿ ಕ್ರಮ ವಹಿಸಬೇಕೆಂದು ತಿಳಿಸಿದರು.
ಈಗಾಗಲೇ ಈ ಪ್ರಾಯೋಗಿಕ ಯೋಜನೆಯನ್ನು ಬಳ್ಳಾರಿ ಹಾಗೂ ಉಡುಪಿಯಲ್ಲಿ ಆರಂಭಿಸಲಾಗಿದೆ. 60 ವರ್ಷ ಪೂರ್ಣಗೊಂಡಿರುವವರ ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ವಿವರ ಪಡೆದು ಅರ್ಹರಿಗೆ ಸರ್ಕಾರದಿಂದ ನೀಡಲಾಗುವ ಪಿಂಚಣಿ ಒದಗಿಸುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ಅಂಚೆ ಮೂಲಕ ವಿತರಿಸಲಾಗುವ ಮಾಸಾಶನ ಕೆಲವರಿಗೆ ಲಭ್ಯವಾಗುತ್ತಿಲ್ಲವೆಂದು ದೂರುಗಳಿದ್ದು, ಎಲ್ಲರಿಗೂ ಕಡ್ಡಾಯವಾಗಿ ಬ್ಯಾಂಕ್ ಖಾತೆಯ ಮೂಲಕವೇ ಪಾವತಿಸಬೇಕು. ಕೆಲವೂಮ್ಮೆ ಸಾವೀಗಿಡಾದವರಿಗೆ ಪಿಂಚಣಿ ಮೊತ್ತ ಪಾವತಿಯಾಗಿತಿದ್ದು, ಅಂತಹವರನ್ನು ಗುರುತಿಸಬೇಕು, ಮರಳಿ ಅವರ ಖಾತೆಯಿಂದ ಹಣವನ್ನು ಪಡೆಯಬೇಕು ಎಂದರು.
ಜಿಲ್ಲೆಯಲ್ಲಿ ಎಲ್ಲಾ ಗ್ರಾಮಗಳಲ್ಲೂ ಕಡ್ಡಾಯವಾಗಿ ಸ್ಮಶಾನಗಳನ್ನು ನಿರ್ಮಿಸಿಕೊಡಬೇಕು, ಯಾವುದೇ ಜಾತಿ, ಧರ್ಮ ಬೇದಭಾವ ಬರಬಾರದು. ಅದು ಸಾರ್ವಜನಿಕರ ಆಸ್ತಿಯಾಗಿರಬೇಕು. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದರೆ ಖಾಸಗಿಯಾಗಿ ಖರೀದಿಸಿ, ಸರ್ಕಾರಿ ಸ್ಥಳದಲ್ಲಿ ತಹಶೀಲ್ದಾರರು, ಸಹಾಯಕ ಆಯುಕ್ತರು ನೀಡಿರುವ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳು ಕೂಡಲೇ ಅನುಮತಿ ನೀಡಬೇಕು. ನಗರದೊಳಗೆ ಜಾಗವಿಲ್ಲದಿದ್ದರೆ, ಆಸು ಪಾಸಿನಲ್ಲಿ ಲಭ್ಯವಿರುವ ಸ್ಥಳದಲ್ಲಿ ರುದ್ರಭೂಮಿಯನ್ನು ನಿರ್ಮಿಸಿಕೊಡಬೇಕೆಂದು ಅವರು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಸಾರ್ವಜನಿಕರು ಪರಸ್ಪರ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಲು ಹಾಗೂ ಮಾಸ್ಕ್ ಧರಿಸುವಂತೆ ಪೊಲೀಸರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಹೆಚ್ಚು ಜನರು ಸೇರುವ ಸ್ಥಳದಲ್ಲಿ ಪರಿಶೀಲಿಸಿ ದಂಡ ವಿಧಿಸಬೇಕು. ಜಿಲ್ಲೆಯ ವಿವಧಡೆ ಮಳೆ ಯಾಗುತ್ತಿದ್ದು, ರೈತರ ಬೆಳೆ ಹಾನಿ ಕುರಿತು ಸಮೀಕ್ಷೆಯನ್ನು ಎಚ್ಚರದಿಂದ ನಿರ್ವಹಿಸಿ ಬೆಳೆ ಹಾನಿಯಾದವರಿಗೆ ಕೂಡಲೆ ಪರಿಹಾರ ಒದಗಿಸಲು ಜಿಲ್ಲಾಡಳಿತ ಚುರುಕಾಗಿ ಕೆಲಸ ನಿರ್ವಹಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಡಾ.ಶಿವರಾಜ ಪಾಟೀಲ್, ರಾಜಾ ವೆಂಕಟಪ್ಪ ನಾಯಕ, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಜಿ.ಪಂ.ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಸಹಾಯಕ ಆಯುಕ್ತರು, ತಹಶೀಲ್ದಾರರು, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.