ಅರ್ಹರಿಗೆ ಪರಿಹಾರ ಶೀಘ್ರ ತಲುಪಿಸಲು ಕ್ರಮ ವಹಿಸಿ

ಗದಗ ಜೂ.10: ಕೋವಿಡ್-19 ರ ಲಾಕ್‍ಡೌನ್ ಸಮಯದಲ್ಲಿ ಆರ್ಥಿಕ ಸಂಕಷ್ಟಗೊಳಗಾದ ಶ್ರಮಿಕರ ಬದುಕಿಗೆ ನೆರವಿನ ಆಸರೆ ನೀಡುವ ಉದ್ದೇಶದಿಂದ ಪರಿಹಾರ ಧನ ಸರ್ಕಾರ ಘೋಷಿಸಿದ್ದು ಅರ್ಹರಿಗೆ ಶೀಘ್ರವೇ ಪರಿಹಾರ ಧನ ತಲುಪಿಸಲು ಸಂಬಂಧಿಸಿದ ಇಲಾಖಾಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಸೂಚಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಏರ್ಪಡಿಸಲಾದ ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೀಡಾದ ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಣೆಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಾಕ್‍ಡೌನ್ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾದ ಕಾರ್ಮಿಕ ಇಲಾಖೆಯ 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ 1 ಬಾರಿ ಪರಿಹಾರವಾಗಿ 2000 ರೂ. ನೆರವು ನೀಡಲಾಗುತ್ತಿದ್ದು ಇದರಲ್ಲಿ ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೇಲರ್ ಗಳು, ಮೆಕ್ಯಾನಿಕ್ , ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಭಟ್ಟಿ ಕಾರ್ಮಿಕ ವೃತ್ತಿಯಲ್ಲಿ ತೊಡಗಿರುವವರು ಫಲಾನುಭವಿಗಳಾಗಿದ್ದಾರೆ. ಅವರೆಲ್ಲರಿಗೂ ಸರ್ಕಾರ ನಿಗದಿಪಡಿಸಿದ ಅರ್ಹತೆ ಅನುಸಾರ ಶೀಘ್ರ ಪರಿಹಾರ ನೆರವು ತಲುಪಿಸಲು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಹೇಳಿದರು.
ಇದೇ ರೀತಿ ಹೂ ಬೆಳೆಗಾರರು, ಹಣ್ಣು ತರಕಾರಿ ಬೆಳೆಗಾರರು, ಅಟೋ ಚಾಲಕರು, ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಸ್ಥರು, ಕಲಾವಿದರು, ವಿದ್ಯುತ್ ಮಗ್ಗ ನೇಕಾರರು, ಚಲನಚಿತ್ರ ಕಿರುತೆರೆ ಅಸಂಘಟಿತ ಕಾರ್ಮಿಕರು, ಮುಜರಾಯಿ ದೇವಸ್ಥಾನದ ಅರ್ಚಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನ್ಯಾಯವಾದಿಗಳಿಗೆ ಪರಿಹಾರ , ಅನುದಾನ ರಹಿತ ಶಾಲೆ ಶಿಕ್ಷಕರಿಗೆ ಪರಿಹಾರ, ಶಾಲಾ ಮಕ್ಕಳಿಗೆ ಹಾಲಿನ ಪುಡಿ ವಿತರಣೆ , ಕೈಗಾರಿಕೆಗಳಿಗೆ ಪರಿಹಾರ ವನ್ನು ಸರ್ಕಾರ ಘೋಷಿಸಿದ್ದು ಕೋವಿಡ್ 2 ನೇ ಅಲೆಯ ಸಂಕಷ್ಟಕ್ಕೊಳಗಾದ ಶ್ರಮಿಕರಿಗೆ ರಾಜ್ಯಾದ್ಯಂತ 1750 ಕೋಟಿ ಪ್ಯಾಕೇಜ್ ಪರಿಹಾರ ನೀಡಲು ಮುಂದಾಗಿದೆ. ಈ ಪರಿಹಾರ ಮೊತ್ತದಲ್ಲಿ ಜಿಲ್ಲೆಯ ಎಲ್ಲ ಅರ್ಹರಿಗೂ ಪರಿಹಾರ ದೊರಕುವಂತೆ ಸಂಬಂಧಿತ ಇಲಾಖೆ ಮುಖ್ಯಸ್ಥರು ಕ್ರಮ ವಹಿಸುವ ಮೂಲಕ ಸರ್ಕಾರದ ನೆರವಿನ ಆಸರೆ ಅರ್ಹರಿಗೆ ತಲುಪಿಸಬೆಕೆಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಕಾರ್ಮಿಕ ಅಧಿಕಾರಿ ಸುಧಾ ಗರಗ, ನಗರಸಭೆ ಪೌರಾಯುಕ್ತ ರಮೇಶ ಜಾಧವ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅನಿಕುಮಾರ್ ಮುದ್ದಾ , ಮುಜರಾಯಿ ತಹಶೀಲ್ದಾರ ಕುಮಾರ್ ಅಣ್ಣಿಗೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಶಿಕ್ಷಣ ಇಲಾಖೆ , ತೋಟಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿüವೃದ್ಧಿ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.