ಅರ್ಹರಿಗೆ ನಿವೇಶನ ಹಂಚಿಕೆ ಮಾಡಲು ಸಿಇಓ ಸೂಚನೆ

ತುಮಕೂರು, ಜು. ೨೯- ಮುಖ್ಯಮಂತ್ರಿ ನಿವೇಶನ ಯೋಜನೆಯಡಿ ನಿವೇಶನ ರಹಿತ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮುಖ್ಯಮಂತ್ರಿ ಗ್ರಾಮೀಣ ನಿವೇಶನ ಯೋಜನೆಗಳಡಿ ಮಂಜೂರಾಗಿರುವ ಜಮೀನಿನಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳ ಮತ್ತು ಹಕ್ಕುಪತ್ರ ವಿತರಿಸಿರುವ ಮತ್ತು ವಿತರಿಸಲು, ಬಾಕಿಯಿರುವ ಪ್ರಸ್ತಾವನೆಗಳ ಕುರಿತಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಇಂಜಿನಿಯರ್‌ಗಳು, ಭೂದಾಖಲೆಗಳ ಸಹಾಯಕ ನಿರ್ದೇಶಕರುಗಳು, ಗ್ರಾಮ ಪಂಚಾಯ್ತಿಗಳ ಪಿಡಿಓಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಗ್ರಾಮೀಣ ನಿವೇಶನ ಯೋಜನೆಗಾಗಿ ಜಿಲ್ಲಾಧಿಕಾರಿಗಳು, ಜಿಲ್ಲೆಗೆ ೭೦೦ ಎಕರೆ ಜಮೀನನ್ನು ಮಂಜೂರು ಮಾಡಿರುತ್ತಾರೆ. ಈ ಜಮೀನು ತಹಶೀಲ್ದಾರ್‌ಗಳಿಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಸ್ತಾಂತರವಾಗಬೇಕು. ಎಡಿಎಲ್‌ಆರ್ ಅವರಿಂದ ಸರ್ವೇ ಸ್ಕೆಚ್ ಆಗಬೇಕು. ಸ್ಕೆಚ್ ಆಗಿರುವ ಜಮೀನನ್ನು ಎಇಇ, ಪಿಆರ್‌ಡಿಯಿಂದ ಅಭಿವೃದ್ಧಿಪಡಿಸಬೇಕು. ಗ್ರಾಮ ಪಂಚಾಯ್ತಿಗಳು ನಡೆಸುವ ಗ್ರಾಮ ಸಭೆಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಲ್ಲದೇ, ನಿವೇಶನ ಪ್ರಸ್ತಾವನೆಯನ್ನು ರಾಜೀವ ಗಾಂಧಿ ವಸತಿ ನಿಗಮಕ್ಕೆ ಸಲ್ಲಿಸಬೇಕು. ನಿಗಮದ ಅನುಮೋದನೆ ಸಿಕ್ಕಿದ ಮೇಲೆ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂದರು.
ವಿವಿಧ ಅಧಿಕಾರಿಗಳ ಹಂತದಲ್ಲಿರುವ ಕೆಲಸಗಳನ್ನು ಪೂರ್ಣಗೊಳಿಸಬೇಕು. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನಿವೇಶನ ರಚಿಸಲಾಗದ ಜಾಗವಾಗಿದ್ದಲ್ಲಿ ತಹಶೀಲ್ದಾರ್ ಅವರಿಗೆ ಪತ್ರ ಬರೆದು ತಿಳಿಸಬೇಕೆಂದರು.
ಅರ್ಹ ಫಲಾನುಭವಿಗಳನ್ನು ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಬೇಕು. ಫಲಾನುಭವಿ ಗ್ರಾಮದಲ್ಲಿಯೇ ವಾಸವಿರಬೇಕು ಬೇರೆ ನಿವೇಶನ, ಮನೆಯನ್ನು ಹೊಂದಿರದ ಅರ್ಹರನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಯೋಜನಾ ನಿರ್ದೇಶಕ ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.