ಅರ್ಹರಿಗೆ ತಲುಪಿದ ದೇವಾಲಯದ ಪ್ರಸಾದ

ಬೆಂಗಳೂರು, ಮೇ.೨೦-ಬನಶಂಕರಿ ದೇವಾಲಯದಲ್ಲಿ ಪ್ರಸಾದ ತಯಾರಿಸಲು ಗೋದಾಮಿನಲ್ಲಿ ಶೇಕರಿಸಲಾಗಿದ್ದ ಆಹಾರ ಪದಾರ್ಥಗಳಲ್ಲಿ ೫೦೦ ಪಾಕೆಟ್ ಆಹಾರ ಸಾಮಗ್ರಿಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ ಅವರು ಅರ್ಹರಿಗೆ ತಲುಪಿಸಿದ್ದಾರೆ.
ನಗರದಲ್ಲಿಂದು ಬನ್ನೇರುಘಟ್ಟ ಅರಣ್ಯ ತಪ್ಪಲಿನಲ್ಲಿರುವ ಹಕ್ಕಿ ಪಿಕ್ಕಿ ಸಮುದಾಯದ ಸದಸ್ಯರಿಗೆ ಬನಶಂಕರಿ ದೇವಾಲಯದಲ್ಲಿ ಪ್ರಸಾದ ತಯಾರಿಸಲು ಗೋದಾಮಿನಲ್ಲಿ ಶೇಕರಿಸಲಾಗಿದ್ದ ಆಹಾರ ಪದಾರ್ಥಗಳಲ್ಲಿ ೫೦೦ ಪಾಕೆಟ್ ಆಹಾರ ಸಾಮಗ್ರಿಯನ್ನು ವಿತರಣೆ ಮಾಡಲಾಯಿತು.
ಲಾಕ್ ಡೌನ್ ಪರಿಣಾಮದಿಂದಾಗಿ ಹಕ್ಕಿ ಪಿಕ್ಕಿ ಜನಾಂಗವೂ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿತ್ತು. ಈ ಸಂದರ್ಭದಲ್ಲಿ ಹಳ್ಳಿಗಾಡಿನ ಪ್ರದೇಶಕ್ಕೆ ಆಹಾರ ಧಾನ್ಯಗಳನ್ನು ತಲುಪಿಸಿರುವುದು ಸಂತಸ ತಂದಿದೆ ಎಂದು ಸಮುದಾಯದ ರಾಮಯ್ಯ ನುಡಿದರು. ಈ ವೇಳೆ ಪ್ರತಿಕ್ರಿಯಿಸಿ ಜಿಲ್ಲಾಧಿಕಾರಿ ಜೆ.ಮಂಜುನಾಥ, ದೇವಾಲಯದ ಪ್ರಸಾದವೂ ಅರ್ಹರಿಗೆ ತಲುಪಿಸುವ ಕೆಲಸ ಮಾಡಲಾಗಿದೆ. ಇದರಿಂದ ಈ ಜನರ ಹೊಟ್ಟೆ ತುಂಬಲಿದ್ದು, ಸರ್ಕಾರದ ಪಡಿತರ ದಿಂದಲೂ ಬಡವರಿಗೆ ಆಹಾರ ಸಾಮಾಗ್ರಿಗಳನ್ನು ತಲುಪಿಸುವ ಕಾರ್ಯ ಚುರುಕುಗೊಳಿಸಲಾಗುವುದು ಎಂದರು.
ಅಲ್ಲದೆ, ಕೋವಿಡ್ ಸೋಂಕುವಿನ ಪ್ರಕರಣಗಳು ಹೆಚ್ಚಾಗುತ್ತಿವೆ, ಇವುಗಳ ನಿಯಂತ್ರಣಕ್ಕೆ ಸರ್ಕಾರ ಹೊಸ ಹೊಸ ಮಾರ್ಗಸೂಚಿಗಳನ್ನು ಆಗಿಂದಾಗೆ ಹೊರಡಿಸುತ್ತಿದ್ದು. ಜಿಲ್ಲೆಯ ಸಾರ್ವಜನಿಕರು ಅವುಗಳನ್ನು ಪಾಲಿಸುವುದರೊಂದಿಗೆ ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಕೊರೋನಾ ಕರ್ಫ್ಯೂ ನಿಯಮಗಳು ಸೇರಿದಂತೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿದ್ದು, ಪ್ರತಿಯೊಬ್ಬರು ಚಾಚು ತಪ್ಪದೆ ಪಾಲಿಸಬೇಕು ತಪ್ಪಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರೊಂದಿಗೆ ದಂಡ ವಿಧಿಸಬೇಕು ಎಂದು ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಆನೇಕಲ್ ತಹಶೀಲ್ದಾರ್ ಪಿ.ದಿನೇಶ್ ಸೇರಿದಂತೆ ಪ್ರಮುಖರಿದ್ದರು.