ಯೆರೆವಾನ್ (ಅರ್ಮೆನಿಯಾ), ಸೆ.೨೨- ಅಜರ್‌ಬೈಜಾನ್ ದಾಳಿಯ ಬಳಿಕ ಸ್ಥಳಾಂತರಗೊಂಡಿರುವ ನಾಗೊರ್ನೊ-ಕರಬಖ್ ಪ್ರದೇಶದ ಜನರಿಗೆ ಪುನರ್ವಸತಿ ಕಲ್ಪಿಸಲು ನಾವು ಸಿದ್ಧರಿದ್ದೇವೆ ಎಂದು ಅರ್ಮೆನಿಯಾ ಪ್ರಧಾನಿ ನಿಕೋಲ್ ಪಶಿನ್ಯಾನ್ ಹೇಳಿದ್ದಾರೆ.
ಕರಬಖ್‌ನಲ್ಲಿ ಅರ್ಮೆನಿಯಾ ಮೂಲದ ಜನರಿಗೆ ಯಾವುದೇ ಬೆದರಿಕೆ ಇಲ್ಲದಿದ್ದರೂ ಸಾವಿರಾರು ಸಂಖ್ಯೆಯ ಜನರಿಗೆ ಪುನರ್ವಸತಿ ಕಲ್ಪಿಸಲು ನಾವು ತಯಾರಿದ್ದೇವೆ. ಅಂದಾಜು ೧೨೦,೦೦೦ ಅರ್ಮೇನಿಯನ್ನರಿಗೆ ಗೌರವಯುತ ಮತ್ತು ಸುರಕ್ಷಿತ ಪರಿಸ್ಥಿತಿಗಳಲ್ಲಿ ತಮ್ಮ ಮನೆಗಳಲ್ಲಿ ಉಳಿಯಲು ಅನುಮತಿ ನೀಡಲಾಗುವುದು.
ಖಾನ್ಕೆಂಡಿಯ ವಿಮಾನ ನಿಲ್ದಾಣದಲ್ಲಿ ಸುಮಾರು ೧೦ ಸಾವಿರಕ್ಕೂ ಅಧಿಕ ನಿರಾಶ್ರಿತರು ಆಗಮಿಸಿದ್ದಾರೆ ಎಂದು ಪಶಿನ್ಯಾನ್ ತಿಳಿಸಿದ್ದಾರೆ. ಕರಬಖ್ ಪ್ರಾಂತ್ಯವನ್ನು ಶಾಂತಪೂರ್ಣ ರೀತಿಯಲ್ಲಿ ಅಜರ್‌ಬೈಜಾನ್ ಜೊತೆ ಜೋಡಿಸಲಾಗುವುದು ಎಂದು ಅಜರ್‌ಬೈಜಾನ್ ಪ್ರಧಾನಿ ಇಲ್ಹೆಮ್ ಅಲಿಯೆವ್ ತಿಳಿಸಿದ್ದಾರೆ. ಅದರೆ ಕರಬಖ್‌ನಲ್ಲಿರುವ ಮಾನವ ಹಕ್ಕುಗಳ ನಾಯಕರು, ಇಲ್ಲಿನ ಸ್ಥಳೀಯ ಅರ್ಮೆನಿಯಾ ಜನಾಂಗದ ಜನರ ಮೇಲೆ ದೌರ್ಜನ್ಯ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರಾಬಖ್‌ನ ಮಾನವ ಹಕ್ಕುಗಳ ಓಂಬುಡ್ಸ್‌ಮನ್ ಗೆಗಾಮ್ ಸ್ಟೆಪನ್ಯನ್, ಖಾಂಕೆಂಡಿಯ (ಕರಬಖ್) ಬೀದಿಗಳು ಸ್ಥಳಾಂತರಗೊಂಡ ಜನರಿಂದ ತುಂಬಿವೆ. ಅವರು ಹಸಿವಿನಿಂದ, ಭಯದಿಂದ ಮತ್ತು ಅನಿಶ್ಚಿತತೆಯಿಂದ ಕೂಡಿದ್ದಾರೆ ಎಂದು ಖೇದ ವ್ಯಕ್ತಪಡಿಸಿದ್ದಾರೆ. ಕರಾಬಖ್‌ನಲ್ಲಿನ ಜನಾಂಗೀಯ ಅರ್ಮೇನಿಯನ್ ಪಡೆಗಳು ೨೪ ಗಂಟೆಗಳ ತೀವ್ರ ಹೋರಾಟದ ನಂತರ ಅಜರ್‌ಬೈಜಾನ್‌ನೊಂದಿಗೆ ಕದನ ವಿರಾಮವನ್ನು ಒಪ್ಪಿಕೊಂಡಿವೆ. ಸಹಜವಾಗಿಯೇ ಅರ್ಮೆನಿಯಾ ಜನರ ರಕ್ಷಣೆಯಲ್ಲಿ ವಿಫಲಗೊಂಡ ಅರ್ಮೆನಿಯಾ ಪ್ರಧಾನಿ ವಿರುದ್ಧ ಆಕ್ರೋಶ ಕೂಡ ಭುಗಿಲೆದ್ದಿವೆ.