ಅರ್ಬುದ ರಣಭೇರಿ -೧

ದಿನೇ ದಿನೇ ಪ್ರಪಂಚದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಭಾರತದ ಕ್ಯಾನ್ಸರ್ ಪೀಡಿತರ ಸಂಖ್ಯಾಪಟ್ಟಿಯಲ್ಲಿ ಸ್ತನ ಕ್ಯಾನ್ಸರ್ ಮೊದಲನೆಯ ಸ್ಥಾನವನ್ನು ಗಳಿಸಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸ್ತನ ಕ್ಯಾನ್ಸರ್ ನ್ನು ಗುಣ ಪಡಿಸುವ ಸಾಧ್ಯತೆಗಳು ೮೦-೯೦% ಇದ್ದು ಭಾರತದಲ್ಲಿ ಮಾತ್ರ ಇದರ ಸಂಖ್ಯೆ ಕೇವಲ ೬೬% ನಷ್ಟಿದೆ. ಈ ಸಂಖ್ಯಾ ವ್ಯತ್ಯಾಸಕ್ಕೆ ಹಲವು ಕಾರಣಗಳಿದ್ದರೂ ಜನ ಸಾಮಾನ್ಯರಲ್ಲಿ ಕ್ಯಾನ್ಸರ್ ನ ಜಾಗೃತಿಯ ಕೊರತೆ ಪ್ರಮುಖ ಕಾರಣವಾಗಿದೆ.ಭಾರತದಲ್ಲಿ ಸ್ತನ ಕ್ಯಾನ್ಸರ್ ೪೫-೫೦ ವಯಸ್ಸಿನ ಮಹಿಳೆಯರಲ್ಲಿ ಅಧಿಕವಾಗಿ ಪತ್ತೆಯಾಗುತ್ತದೆ. ಹದಿಹರೆಯದವರಲ್ಲಿಯೂ, ವ್ರುದ್ಧರಲ್ಲಿಯೂ, ಗರ್ಭಿಣಿಯರಲ್ಲಿಯೂ, ಅಪ್ರಸವೆಯರಲ್ಲಿಯೂ ಸ್ತನ ಕ್ಯಾನ್ಸರ್ ನ್ನು ಕಾಣಬಹುದಾಗಿದೆ.ಮೊಲೆಯಲ್ಲಿ ಗಡ್ಡೆ, ಕಂಕುಳಿನಲ್ಲಿ ಗಂಟು, ಮೊಲೆಯ ಚರ್ಮದ ಬಣ್ಣ ಬದಲಾವಣೆ, ಸುಕ್ಕು ಹಿಡಿಯುವುದು, ತೊಟ್ಟಿನಿಂದ ರಕ್ತ ಅಥವಾ ರಕ್ತ ಮಿಶ್ರಿತ ದ್ರವ ಸೋರಿಕೆ, ಸ್ತನದ ಗಾತ್ರ ಅಥವಾ ಆಕಾರದ ಬದಲಾವಣೆ- ಇವು ಸ್ತನ ಕ್ಯಾನ್ಸರ್ ನ ಪ್ರಮುಖ ಲಕ್ಷಣಗಳು. ಸ್ತನ ಕ್ಯಾನ್ಸರ್ ಇತರೆ ಭಾಗಗಳಿಗೆ ಹರಡಿದವರಲ್ಲಿ ಮೂಳೆ ನೋವು, ಉಸಿರಾಟದ ತೊಂದರೆ, ಕಾಮಾಲೆಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.ಸ್ತನ ಕ್ಯಾನ್ಸರ್ ನ ರೋಗಪತ್ತೆಗೆ ಬಯಾಪ್ಸಿ/ಸೂಜಿ ಪರೀಕ್ಷೆ, ಅಲ್ಟ್ರಾಸೌಂಡ್, ಮ್ಯಾಮೋಗ್ರಫಿ, ಸಿಟಿ ಸ್ಕ್ಯಾನ್, ಪೆಟ್ ಸ್ಕ್ಯಾನ್ ಮೊದಲಾದ ತನಿಖೆಗಳನ್ನು ಬಳಸಲಾಗುತ್ತದೆ. ಸ್ತನಗಳನ್ನು ಎರಡು ಪ್ಲೇಟ್ ಗಳ ನಡುವೆ ಒತ್ತಿ ಎಕ್ಸ ರೇ ಕಿರಣಗಳನ್ನು ಹರಿಸಿ ಕ್ಯಾನ್ಸರ್ ಗಡ್ಡೆಯನ್ನು ಕಣ್ಣಿಗೆ ಕಾಣುವಷ್ಟು ಅಥವಾ ಸ್ಪರ್ಶದ ಅನುಭವಕ್ಕೆ ಬರುವಷ್ಟು ದೊಡ್ಡದಾಗುವ ಮೊದಲೇ ಗುರುತಿಸುವುದು ಸ್ಕ್ರೀನಿಂಗ್ ಮ್ಯಾಮೋಗ್ರಫಿಯ ತತ್ವ.

೪೦ ವರ್ಷ ಮೇಲ್ಪಟ್ಟವರು ಎರಡು ವರ್ಷಗಳಿಗೊಮ್ಮೆ ಪರಿಣತರಿಂದ ಸ್ತನ ಪರೀಕ್ಷೆ, ೫೦ ವರ್ಷ ಮೇಲ್ಪಟ್ಟವರು ಎರಡು ವರ್ಷಗಳಿಗೊಮ್ಮೆ ಪರಿಣತರಿಂದ ಸ್ತನ ಪರೀಕ್ಷೆ ಹಾಗು ಸ್ಕ್ರೀನಿಂಗ್ ಮ್ಯಾಮೋಗ್ರಫಿ ಮಾಡಿಸುವುದು ಪ್ರಯೋಜನಕಾರಿಯಾಗಿದೆ.ಭಾರತದಲ್ಲಿ ಸ್ತನ ಕ್ಯಾನ್ಸರ್ ಹೆಮ್ಮಾರಿಯಾಗಿ ಬೆಳೆಯಲು ರೋಗ ಲಕ್ಷಣ, ರೋಗ ಪತ್ತೆಯ ಅರಿವಿನ ಕೊರತೆಯಷ್ಟೇ ಅಲ್ಲ ಚಿಕಿತ್ಸೆಯ ಅರಿವಿನ ಕೊರತೆಯೂ ಕಾರಣವಾಗಿದೆ. ಶಸ್ತ್ರ ಚಿಕಿತ್ಸೆ, ಕೀಮೋಥೆರಪಿ, ವಿಕಿರಣ ಚಿಕಿತ್ಸೆ, ಟಾರ್ಗೆಟೆಡ್ ಥೆರಪಿ (ಉದ್ದೇಶಿತ ಚಿಕಿತ್ಸೆ) ಹಾಗೂ ಹಾರ್ಮೋನ್ ಚಿಕಿತ್ಸೆ ಸ್ತನ ಕ್ಯಾನ್ಸರ್ ನಿಯಂತ್ರಣದ ಅಡಿಪಾಯ ಸ್ತಂಭಗಳು. ಹಂತಾನುಸಾರವಾಗಿ ಇವುಗಳಲ್ಲಿ ಒಂದು ಅಥವಾ ಎಲ್ಲ ಪ್ರಕಾರದ ಚಿಕಿತ್ಸೆಗಳ ಬಳಕೆಯ ಅಗತ್ಯವಿರುತ್ತದೆ. ಅಸಂಪೂರ್ಣ ಚಿಕಿತ್ಸೆಯಿಂದ ಕ್ಯಾನ್ಸರ್ ಮರುಕಳಿಸುವಿಕೆಯ ಸಂಭವ ಅಧಿಕವಾಗಿರುತ್ತದೆ. ನಿರ್ಲಕ್ಷ್ಯಿಸದೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಪೂರ್ಣ ಚಿಕಿತ್ಸೆಯನ್ನು ಪಡೆಯುವುದು ಅಗತ್ಯವಾಗಿದೆ.ದುಶ್ಚಟಗಳಿಲ್ಲದ ಒಳ್ಳೆಯ ಜೀವನಪದ್ಧತಿಯನ್ನು ಅಳವಡಿಸಿಕೊಂಡು ಕ್ಯಾನ್ಸರ್ ನ ಬಗ್ಗೆ ಅರಿವು ಬೆಳೆಸಿಕೊಂಡು ಸಮಯಪ್ರಜ್ಞೆಯಿಂದ ಮುನ್ನಡೆಯುತ್ತಾ ಕ್ಯಾನ್ಸರ್ ನ ಆರ್ಭಟಕ್ಕೆ ಕಡಿವಾಣ ಹಾಕಲು ಎಲ್ಲರೂ ನಮ್ಮ ಅಳಿಲು ಸೇವೆಯನ್ನು ಅರ್ಪಿಸೋಣ.

ಡಾ. ಶ್ವೇತ ಎಸ್ (ನಿನುತ) ಮೆಡಿಕಲ್ ಆಂಕಾಲಜಿಸ್