ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುನಿರಾಜುಗೆ ಅಭಿನಂದನಾ ಸಮಾವೇಶ

ಕೋಲಾರ,ಜೂನ್. ೨೨- ಕೋಲಾರ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತರ೦ಗ ವತಿಯಿಂದ ಕೋಲಾರ ಅರ್ಬನ್ ಬ್ಯಾಂಕ್ ನೂತನ ಅಧ್ಯಕ್ಷ ಡಿಪಿಎಸ್ ಮುನಿರಾಜು ರವರಿಗೆ ಜುಲೈ ೧ಕ್ಕೆ ಅಭಿನಂದನಾ ಸಮಾವೇಶ ನಡೆಸಲು ತಿರ್ಮಾನಿಸಲಾಗಿದೆ.
ಈ ಬಗ್ಗೆ ನಗರದ ನಚಿಕೇತ ನಿಲಯದ ಆವರಣದಲ್ಲಿ ಕರೆಯಲಾಗಿದ್ದ ಕೋಲಾರ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತರ೦ಗದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಡಿಪಿಎಸ್ ಮುನಿರಾಜು ಅವರ ಅಭಿನಂಧನಾ ಸಮಾವೇಶದ ಕುರಿತು ಚರ್ಚೆ ನಡೆಸಲಾಯಿತು. ಕೋಲಾರ ಜಿಲ್ಲೆಯ ಸಹಕಾರಿ ಕ್ಷೇತ್ರದ ಇತಿಹಾಸದಲ್ಲಿ ತಳಸಮುದಾಯದ ಓರ್ವ ವ್ಯಕ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಶೋಷಿತ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದ್ದು, ಭವಿಷ್ಯದ ತಲೆಮಾರಿಗೆ ಸ್ಪೂರ್ತಿದಾಯಕ ಸಂದೇಶವನ್ನು ನೀಡುವ ಸಲುವಾಗಿ ಈ ಅಭಿನಂದನಾ ಸಮಾವೇಶ ನಡೆಸಲು ಒಮ್ಮತದ ಅಭಿಪ್ರಾಯಕ್ಕೆ ಬರಲಾಯಿತು.
ಡಿಪಿಎಸ್ ಮುನಿರಾಜು ಶೋಷಿತ ಸಮಾಜದ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದರೂ ಬಡವರ ಪರವಾದ ದ್ವನಿಯಾಗಿ ಸುಮಾರು ಮೂರು ದಶಕಗಳ ಕಾಲ ತಮ್ಮ ಸಮಾಜ ಸೇವೆಯಿಂದ ಜನ ಮನ್ನಣೆಗಳಿಸುವ ಮೂಲಕ ಜನಾನುರಾಗಿದ್ದರಲ್ಲದೆ, ಎಲ್ಲಾ ಸಮುದಾಯಗಳ ಪ್ರೀತಿಗೆ ಪಾತ್ರರಾಗಿ ಇಂದು ಕೋಲಾರ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಅವರೊಬ್ಬ ಅಜಾತಶತ್ರು ಎನ್ನುವುದನ್ನು ಸಾಭೀತು ಪಡಿಸಿದೆ. ಅವರ ಆಯ್ಕೆ ಹೊಸ ಪೀಳಿಗೆಯ ಜನ ನಾಯಕರಿಗೆ ಸ್ಪೂರ್ತಿಯಾಗಲಿದೆ ಎಂದು ಸಭೆಯಲ್ಲಿ ಪರಿಭಾವಿಸಲಾಯಿತು.
ಸಮಾವೇಶದಲ್ಲಿ ಜಿಲ್ಲೆಯ ಲೋಕಸಭಾ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು, ನೂತನ ಶಾಸಕರು, ವಿಧಾನ ಪರಿಷತ್ ಸದಸ್ಯರು, ದಲಿತ ಚಳುವಳಿಯ ಹಿರಿಯ ನಾಯಕರು, ಸಾಮಾಜಿಕ ಚಿಂತಕರು, ಹಾಗೂ ಅಪಾರ ಸಂಖ್ಯೆಯ ದಲಿತ ಸಂಘಟನೆಗಳ ಜಿಲ್ಲಾ ಮಟ್ಟದ ತಾಲ್ಲೂಕು ಮಟ್ಟದ ಮುಖಂಡರು ಸೇರಿ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲು ಕ್ರಿಯಾ ಯೋಜನೆ ರೂಪಿಸಲಾಯಿತು.
ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸೂಲೂರು ಆಂಜಿನಪ್ಪ, ಡಿಪಿಎಸ್ ಹಿರಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಮಂಜುನಾಥ್, ಅಧ್ಯಕ್ಷ ಗಾಂಧೀನಗರ ರಾಜಕುಮಾರ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಬೆಳಮಾರನಹಳ್ಳಿ ಆನಂದ್, ವರದೇನಹಳ್ಳಿ ವೆಂಕಟೇಶ್, ನರಸಾಪುರ ಎಸ್.ನಾರಾಯಣಸ್ವಾಮಿ, ಪುರಹಳ್ಳಿ ಯಲ್ಲಪ್ಪ, ಮೇಡಿಹಾಳ ಮುನಿಆಂಜಿನಪ್ಪ, ಖಾದ್ರಿಪುರ ರಾಜೇಶ್, ಗಂಗಮ್ಮಪಾಳ್ಯ ರಾಮಯ್ಯ, ಗಾಂಧಿನಗರದ ರೇಣುಪ್ರಸಾದ್, ದಿನ್ನೂರು ನಾರಾಯಣಪ್ಪ, ಸೇರಿದಂತೆ ಜಿಲ್ಲೆಯ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.