ಅರ್ಧ ಬಾಗಿಲು ತೆರೆದು ಬಟ್ಟೆ ವ್ಯಾಪಾರ: ಗ್ರಾಹಕರಿಗೆ ಲಾಠಿ ರುಚಿ

ದಾವಣಗೆರೆ,ಮೇ.5: ಕೊರೊನಾ ನಿಯಂತ್ರಣ ಕ್ರಮವಾಗಿ ರಾಜ್ಯ ಸರ್ಕಾರ ಘೋಷಿಸಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಅನಗತ್ಯ ವಸ್ತುಗಳ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಈ ಮಧ್ಯೆಯೂ ಬಟ್ಟೆ ಅಂಗಡಿ ತೆರೆದುಕೊಂಡು ಅರ್ಧ ಬಾಗಿಲು ತೆಗೆದುಕೊಂಡು ವ್ಯಾಪಾರ ನಡೆಸುತ್ತಿದ್ದ ಅಂಗಡಿಗೆ ನುಗ್ಗಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಗುಂಪಾಗಿ ಸೇರಿದ್ದ ಜನರನ್ನು ಚದುರಿಸಿರುವ ಘಟನೆ ಇಲ್ಲಿನ ಭಾಷಾ ನಗರದಲ್ಲಿ ನಡೆದಿದೆ.
ಮೇ 15ರಂದು ರಂಜಾನ್ ಹಬ್ಬ ಇರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಲೆಕ್ಕಿಸದೆ ಭಾಷಾ ನಗರದ ಮಿಲ್ಲತ್ ಬ್ಯಾಂಕ್ ಬಳಿಯ ಹಾಂಕಾAಗ್ ಫ್ಯಾಷನ್ಸ್ ಬಟ್ಟೆ ಅಂಗಡಿಯನ್ನು ತೆರೆದು, ಅಂಗಡಿ ಸೆಟ್ರಸ್ ಅರ್ಧಕ್ಕೆ ಎಳೆದುಕೊಂಡು ಅಂಗಡಿಯ ಒಳಗಡೆ ಸಾಕಷ್ಟು ಗ್ರಾಹಕರನ್ನು ಗುಂಪಾಗಿ ಸೇರಿಸಿಕೊಂಡು ಭರ್ಜರಿ ವ್ಯಾಪಾರ ನಡೆಸುತ್ತಿದ್ದರು.
ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಆಜಾದ್ ನಗರ ಪೊಲೀಸರು, ಬಟ್ಟೆ ಅಂಗಡಿಯ ಒಳಗೆ ನುಗ್ಗಿ, ಲಘು ಲಾಠಿ ಪ್ರಹಾರ ನಡೆಸಿ, ಅಂಗಡಿಯಲ್ಲಿ ಜಮಾವಣೆಯಾಗಿದ್ದ ಗ್ರಾಹಕರನ್ನುಜ ಓಡಿಸಿ, ಅಂಗಡಿ ಮಾಲೀಕರ ವಿರುದ್ಧ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಕಾಯ್ದೆಯಡಿ ದೂರು ದಾಖಸಿಕೊಂಡಿದ್ದಾರೆ.
ಪೊಲೀಸರು ಅಂಗಡಿಯ ಸೆಟ್ರಸ್ ಎತ್ತು, ಒಳಗೆ ನುಗ್ಗಿ ಲಾಠಿ ಝಳಿಪಿಸುತ್ತಿದ್ದಂತೆ ಅಂಗಡಿಯಲ್ಲಿದ್ದ ಗ್ರಾಹಕರು ಕೈಗೆ ಸಿಕ್ಕಷ್ಟು ಬಟ್ಟೆಗಳನ್ನು ಎತ್ತಿಕೊಂಡು ಓಡಲಾರಂಭಿಸಿದ್ದಾರೆ. ಹೀಗೆ ಓಡುವಾಗ ದಾರಿಯಲ್ಲಿ ಬಿದ್ದ ಬಟ್ಟೆಗಳನ್ನು ಅಂಗಡಿಯ ಹೊರಗಡೆ ನಿಂತವರು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಹೊಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆಯಲು ಫೋನ್ ಮೂಲಕ ಸಂಪರ್ಕಿಸಿದರೂ ಪೊಲೀಸರು ಸಂಪರ್ಕಕ್ಕೆ ಸಿಗಲಿಲ್ಲ.