ಅರ್ಧಕ್ಕೆ ಸ್ಥಗಿತಗೊಂಡ ಎನ್.ಆರ್.ಇ.ಜಿ. ರಸ್ತೆ ಕಾಮಗಾರಿ

ಶಿವಮೊಗ್ಗ, ಮಾ. 16: ಶಿವಮೊಗ್ಗ ತಾಲೂಕು ಬಸವನಗಂಗೂರು ಗ್ರಾಮದ ಕೆ.ಹೆಚ್.ಬಿ ಪ್ರೆಸ್
ಕಾಲೋನಿಯಲ್ಲಿ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತ ಎನ್.ಆರ್.ಇ.ಜಿ. ಯೋಜನೆಯಡಿ
ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ನಾಗರೀಕರು
ತೊಂದರೆ ಪಡುವಂತಾಗಿದೆ.ಕೆರೆ ನೀರು ನುಗ್ಗಿದ ಪರಿಣಾಮದಿಂದ ದುರಸ್ತಿಗೀಡಾಗಿದ್ದ ರಸ್ತೆಯನ್ನು, ಕಳೆದ ಆರೇಳು
ತಿಂಗಳ ಹಿಂದೆ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ವೆಟ್ ಮಿಕ್ಸ್
ಹಾಕಿ ಎರಡ್ಮೂರು ತಿಂಗಳಾಗುತ್ತಾ ಬಂದರೂ ಇಲ್ಲಿಯವರೆಗೂ ಕಾಂಕ್ರಿಟ್ ಹಾಕಿಲ್ಲ.
ರಸ್ತೆಗೆ ಹಾಕಿದ್ದ ವೆಟ್ ಮಿಕ್ಸ್ ಹಾಳಾಗುತ್ತಿದ್ದು, ಜಲ್ಲಿ ಕಲ್ಲುಗಳು ಕಿತ್ತು
ಬರಲಾರಂಭಿಸಿದೆ. ಧೂಳಿನ ಪ್ರಮಾಣವೂ ಹೆಚ್ಚಾಗಿದೆ. ಈ ಕುರಿತಂತೆ ಜಿಲ್ಲಾ ಪಂಚಾಯ್ತಿ ಉಪ
ಕಾರ್ಯದರ್ಶಿ ಮಲ್ಲಿಕಾರ್ಜುನ್ ತೊದಲಬಾಗಿ ಅವರ ಗಮನಕ್ಕೆ ಹಲವು ಬಾರಿ ನಿವಾಸಿಗಳು
ತಂದಿದ್ದಾರೆ.ಅವರು ಕೂಡ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಬ್ಬಲಗೆರೆ ಗ್ರಾಪಂ ಪಿಡಿಓಗೆ
ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ ಅವರ ಮಾತಿಗೂ ಕಿಮ್ಮತ್ತೂ
ಇಲ್ಲದಂತಾಗಿದ್ದು, ಇಲ್ಲಿಯವರೆಗೂ ರಸ್ತೆ ಕಾಮಗಾರಿ ಆರಂಭಿಸಿಲ್ಲ!
ಮತ್ತೊಂದೆಡೆ, ಯುಜಿಡಿ ಅವ್ಯವಸ್ಥೆಯಿಂದ ಕೊಳಚೆ ನೀರು ಹೊರಬರುತ್ತಿದೆ. ಚರಂಡಿಯಲ್ಲಿ
ನಿಂತುಕೊಂಡಿದ್ದು ದುರ್ನಾತ ಬೀರುತ್ತಿದೆ. ಅವ್ಯವಸ್ಥೆ ಸರಿಪಡಿಸಲು ಇಲ್ಲಿಯವರೆಗೂ
ಕ್ರಮಕೈಗೊಂಡಿಲ್ಲ. ತಕ್ಷಣವೇ ಜಿಲ್ಲಾ ಪಂಚಾಯ್ತಿ ಸಿಇಓ ಎನ್.ಡಿ.ಪ್ರಕಾಶ್ ಅವರು ಇತ್ತ
ಗಮನಹರಿಸಬೇಕಾಗಿದೆ.ಇಲ್ಲದಿದ್ದರೆ ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸುವುದು
ಅನಿವಾರ್ಯವಾಗಲಿದೆ. ಜೊತೆಗೆ ಮುಂಬರುವ ಅಸೆಂಬ್ಲಿ ಚುನಾವಣೆ ಬಹಿಷ್ಕರಿಸಿ ಹೋರಾಟ
ನಡೆಸುವುದು ಅನಿವಾರ್ಯವಾಗಲಿದೆ ಎಂದು ಸ್ಥಳೀಯ ನಿವಾಸಿ ನಾಗರತ್ನ ಅವರು ಎಚ್ಚರಿಕೆ
ನೀಡಿದ್ದಾರೆ.