ಅರ್ಧಕ್ಕೆ ನಿಂತ ಗಡಿಯಾರ ಗೋಪುರ ಕಾಮಗಾರಿ


* 120 ಅಡಿ ಎತ್ತರ 10 ಅಂತಸ್ತು
*  6 ನೇ ಅಂತಸ್ತು ಮುಗಿದಿದೆ
* ಜುಲೈಗೆ ಪೂರ್ಣವಾಗುವ ನಿರೀಕ್ಷೆ ಇತ್ತು.
* 5 ಕೋಟಿ ರೂ ವೆಚ್ಚ
* ತಿಂಗಳಿಂದ ಸ್ಥಗಿತ
ಎನ್. ವೀರಭದ್ರಗೌಡ
ಬಳ್ಳಾರಿ, ಜೂ.03: ನಗರದ ಮಧ್ಯ ಭಾಗದಲ್ಲಿ ನಿರ್ಮಾಣ ಆಗುತ್ತಿರುವ 120 ಅಡಿ ಎತ್ತರದ    ಗಡಗಿ ಚೆನ್ನಪ್ಪ ವೃತ್ತದಲ್ಲಿನ ಲೆಬನಾನ್ ಮಾದರಿಯ  ಗಡಿಯಾರ ಗೋಪುರ ನಿರ್ಮಾಣ ಕಾಮಗಾರಿ ಕಳೆದ ಒಂದು ತಿಂಗಳಿಂದ ಸ್ಥಗಿತಗೊಂಡಿದೆ.
ಲೋಕೋಪಯೋಗಿ ಇಲಾಖೆ ಇದನ್ನು ನಿರ್ಮಾಣ ಮಾಡುತ್ತಿದೆ.  ಅಧಿಕಾರಿಗಳ ಪ್ರಕಾರ ಮುಂದಿನ ತಿಂಗಳ ಅಂತ್ಯಕ್ಕೆ  ಪೂರ್ಣಗೊಳ್ಳಬೇಕಿತ್ತು.
ಜನರು ಬಾಯಲ್ಲಿ ಕರೆಯುವ ರಾಯಲ್ ಸರ್ಕಲ್ ನಲ್ಲಿ ಈ ಮೊದಲು ಅಲ್ಲಂ ಅವರ ಕುಟುಂಬ 1964 ರಲ್ಲಿ ಗಡಿಯಾರ ಗೋಪುರ ನಿರ್ಮಿಸಿ, ಗಡಗಿ ಚೆನ್ನಪ್ಪ ಅವರ ಹೆಸರನ್ನು  ನಾಮಕರಣ ಮಾಡಲಾಗಿತ್ತು.
ಈ ಗೋಪುರವನ್ನು  2008 ರಲ್ಲಿ ರಾತ್ರೋ ರಾತ್ರಿ ಧ್ವಂಸಗೊಳಿಸಲಾಯ್ತು. ನಂತರ  ಜಿಲ್ಲಾಡಳಿತದಿಂದ ಮತ್ತೊಂದು ಗಡಿಯಾರ ಗೋಪುರ ನಿರ್ಮಾಣ ಮಾಡಲಾಯ್ತು. 
ಇದನ್ನು ಸಹ ಹೊಸ ಗೋಪುರ ನಿರ್ಮಾಣಕ್ಕಾಗಿ ಕಳೆದ ಅ.24 ರಂದು ತೆರವುಗೊಳಿಸಲಾಯ್ತು.
ಈ ಸ್ಥಳದಲ್ಲಿ ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ  ಸಚಿವ ಬಿ.ಶ್ರೀರಾಮುಲು, ನಗರ  ಶಾಸಕರಾಗಿದ್ದ ಗಾಲಿ ಸೋಮಶೇಖರ ರೆಡ್ಡಿ ಅವರ ಅಭಿಲಾಶೆಯಂತೆ ನಗರದ ಸೌಂದರೀಕರಣ ಹೆಚ್ಚಿಸಲು, ಸರ್ಕಲ್‌ ನ್ನು ಮತ್ತಷ್ಟು ವಿಸ್ತರಿಸಿ. ಇಲ್ಲಿ 120 ಅಡಿ ಎತ್ತರದ ಲೆಬನಾನ್ ಮಾದರಿಯ  ಗೋಪುರ ನಿರ್ಮಾಣಕ್ಕೆ ಪಿಡಬ್ಲುಡಿ ಮುಂದಾಗಿದೆ.
ಈ ಗೋಪುರ ನಿರ್ಮಾಣಕ್ಕೆ 5 ಕೋಟಿ ರೂ, ಸರ್ಕಲ್ ಮತ್ತು ರಾಜಕುಮಾರ ರಸ್ತೆಯ ಒಂದಿಷ್ಟು ಭಾಗದ ಅಭಿವೃದ್ಧಿಗೆ 2 ಕೋಟಿ ರೂ ಸೇರಿದಂತೆ ಒಟ್ಟಾರೆ 7 ಕೋಟಿ ರೂ ವೆಚ್ಚದಲ್ಲಿ ಈ ಯೋಜಬೆಯನ್ನು ಕೈಗೆತ್ತಿಕೊಂಡಿದೆ.
ಕಳೆದ ಆ15 ರಂದು ಇದಕ್ಕೆ ಪೂಜೆ ಮಾಡಿತು. ಸೆ1 ರಿಂದ ಕಾಮಗಾರಿ ಆರಂಭಿಸಿತು. 4 ವರೆ ಮೀಟರ್ ಅಂದಾಜು 15 ಅಡಿ ಆಳ‌ ಬುನಾದಿ ತೋಡಿ ಅಲ್ಲಿಂದ ಗೋಪುರ ನಿರ್ಮಿಸುವ ಕಾರ್ಯ ನಡೆದಿದೆ.
ದಿನಾಲು 10 ಜನ ಬಾರ್ ಬೆಂಡರ್, ಕಾಂಕ್ರೀಟ್ ಹಾಕುವ ವೇಳೆ 50 ಜನ ಕೆಲಸ ಮಾಡುತ್ತಿದ್ದರು.  ಈವರಗೆ ನೆಲ ಮಟ್ಟದಿಂದ 60 ಅಡಿ, ಆರು ಅಂತಸ್ತು ಕಾಮಗಾರಿ ಮುಗಿದಿದೆ.
ಗೋಪುರದ ಏಳನೇ  ಅಂತಂಸ್ತಿಗೆ ಸ್ಲಾಬ್ ಹಾಕಲು ವ್ಯವಸ್ಥೆ ಆಗಿದೆ.
ಗೋಪುರ ನಿರ್ಮಾಣದ ಜೊತೆ ಜೊತೆಯಲ್ಲೇ ಮೆಟ್ಟಿಲುಗಳು ಮತ್ತು ಲಿಫ್ಟ್ ವ್ಯವಸ್ಥೆಯ ಕಾಮಗಾರಿಯೂ ಸಾಗಿದೆ.
ಮೆಟ್ಟಿಲು ಮತ್ತು ಲಿಫ್ಟ್ 8 ನೇ ಅಂತಸ್ತಿನವರೆಗೆ ನಿರ್ಮಾಣ ಆಗಲಿದೆಯಂತೆ.
ಕಾಮಗಾರಿಗೆ ಅಂದಾಜು 50 ಟನ್ ಕಬ್ಬಿಣ ಮತ್ತು 15 ರಿಂದ 18 ಸಾವಿರ ಚೀಲ ಸಿಮೆಂಟ್ ಬಳಕೆಯ ಸಾಧ್ಯತೆ ಇದೆಯಂತೆ.
ಇದು ಪೂರ್ಣಗೊಂಡ ಮೇಲೆ ರಾಜ್ಯದಲ್ಲಿಯೇ  ಸರ್ಕಲ್ ಒಂದರಲ್ಲಿ ಅತಿ ಎತ್ತರದ ಗೋಪುರ ಇದಾಗಲಿದೆ. ಅಷ್ಟೇ ಅಲ್ಲದೆ ನಗರಕ್ಕೆ ಆಕರ್ಷಣೀಯ ಕೇಂದ್ರವಾಗಲಿದೆ. 
ಆದರೆ ಕಳೆದ ಒಂದು ತಿಂಗಳಿಂದ ಕಾಮಗಾರಿ ಸ್ಥಿಗಿತಗೊಂಡಿದ್ದು ಮುಂದಿನ ತಿಂಗಳಾಂತ್ಯಕ್ಕೆ ಮುಗಿಯುವುದು ಈಗ ಡೌಟ್ ಆಗಿದೆ.
ಚುನಾವಣೆ, ಬಳಿಕ ರಾಜ್ಯದಲ್ಲಿ ಆಡಳಿತ ಬದಲಾವಣೆ ಕಾಮಗಾರಿ ಸ್ಥಿಗಿತಗೊಳ್ಳಲು ಕಾರಣ ಇರಬಹುದೇನೋ.
ಟೆಂಡರ್ ನಲ್ಲಿ ನಿಗಧಿ ಪಡಿಸಿರುವಂತೆ  ಜುಲೈ ವೇಳೆಗೆ ಕಾಮಗಾರಿ ಮುಗಿಯ ಬೇಕಿತ್ತು.
ಆದರೆ ಇದರ ನಿರ್ಮಾಣಕ್ಕೆ ಬೇಕಾದ ಕೆಲ ಸಾಮಾಗ್ರಿ ಹೈದ್ರಾಬಾದಿನಿಂದ ಬರಬೇಕು.
ಕೆಲ ತಾಂತ್ರಿಕ ಕಾರಣದಿಂದ ಮಾಲು ಬಂದಿಲ್ಲ. ಜೊತೆಗೆ ಕೆಲಸಗಾರರು ಊರಿಗೆ ಹೋಗಿದ್ದಾರೆ.  ಸಧ್ಯದಲ್ಲೇ ನಿಂತಿರುವ ಕಾಮಗಾರಿ ಆರಂಭಿಸಲಿದೆ.
ಗವಿಯಪ್ಪ
ಪ್ರಭಾರಿ
ಎಇಇ, ಪಿಡಬ್ಲುಡಿ, ಬಳ್ಳಾರಿ.