ಅರ್ಧಕ್ಕೆ ನಿಂತ ಕಾಮಗಾರಿ ವಾಹನ ಸವಾರರಿಗೆ ತೊಂದರೆ

ಶಹಾಬಾದ: ಮೇ.14:ರಸ್ತೆ ಡಾಂಬರೀಕರಣ ಮಾಡಲು ಗುತ್ತಿಗೆ ಪಡೆದ ಗುತ್ತಿಗೆದಾರ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಹೋಗಿರುವ ಪರಿಣಾಮ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು, ವಾಹನ ಸವಾರರು ತೊಂದರೆ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ.
ನಗರದ ವಾಡಿ ವೃತ್ತದ ಸಮೀಪದಿಂದ ರೇಲ್ವೆ ಸೇತುವೆ ಬಳಿಯ ಸುಮಾರು 400 ಮೀಟರ್ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ತಿಂಗಳಾಗುತ್ತ ಬಂದಿದೆ. ಇದರಿಂದ ಸಾರ್ವಜನಿಕರು ಹಾಗೂ ರಸ್ತೆಯ ಪಕ್ಕದ ಕಚ್ಚಾ ಮಣ್ಣಿನ ರಸ್ತೆಯಲ್ಲಿಯೇ ತೆರಳುವಂತಾಗಿದೆ.ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಯುತ್ತಿರುವ ಕಾಮಗಾರಿ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ.

ಮುರುಮ್, ಕಂಕರ್ ಹಾಕಿ ಅರ್ಧ ರಸ್ತೆ ಬೆಡ್ ನಿರ್ಮಾಣ ಮಾಡಿ ಬಿಟ್ಟು ಹೋಗಿದ್ದೆ ಈಗ ಸಮಸ್ಯೆಯಾಗಿದೆ.ಇಲ್ಲಿ ಸಂಚಾರದ ಸಮಯದಲ್ಲಿ ಭಾರಿ ವಾಹನಗಳಿಂದÀ ಧೂಳು ಆವರಿಸುತ್ತಿದೆ.ಇದರಿಂದ ರಸ್ತೆ ಕಾಣದೇ ತೊಂದರೆಗೆ ಈಡಾಗುತ್ತಿದ್ದಾರೆ.ಅಲ್ಲದೇ ವಾಹನಗಳ ಚಕ್ರದಿಂದ ಕಂಕರ್ ಸಿಡಿದು ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆ ಪಡುವಂತಾಗಿದೆ.ಈಕ್ಕಟ್ಟಾದ ರಸ್ತೆಯ ಮೂಲಕ ದಿನಾಲೂ ಸಾಗುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.ಅಲ್ಲದೇ ಇನ್ನೊಂದು ಕಡೆ ರಸ್ತೆಯ ಬದಿಯಲ್ಲಿ ಹೆಜ್ಜೆಯಷ್ಟೇ ದಾರಿ ಇದೆ.ಅದರಲ್ಲಿಯೇ ಎರಡು ಕಡೆಯಿಂದ ಬೈಕ್‍ಗಳು ಸಾಗುತ್ತಿದ್ದಾರೆ.ಇದರಿಂದ ಅನೇಕ ಚಿಕ್ಕಪುಟ್ಟ ಅಪಘಾತಗಳು ಸಂಭವಿಸಿವೆ.ಕೇವಲ 400 ಮೀ. ರಸ್ತೆ ಕಾಮಗಾರಿಯೂ ಕಳಪೆ ಮಟ್ಟದಿಂದ ಕೂಡಿದೆ.ಗುತ್ತಿಗೆದಾರ ಬೇಸಿಗೆಯಲ್ಲಿಯೇ ಕಾಮಗಾರಿ ಮಾಡದೇ ಹೋದರೆ ಇನ್ನೂ ಹತ್ತು ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗುತ್ತದೆ.ಆಗ ಕಾಮಗಾರಿ ಹೇಗೆ ಮಾಡುತ್ತಾನೆ.ಈ ಬಗ್ಗೆ ಗಮನಹರಿಸಬೇಕಾದ ಅಧಿಕಾರಿಗಳು ಮೌನ ವಹಿಸಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ನಗರದ ಎಲ್ಲಾ ಕಡೆ ರಸ್ತೆ ಸಮಸ್ಯೆಯಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಬೇಗನೆ ರಸ್ತೆ ನಿರ್ಮಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿರುವುದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕರ್ತವ್ಯ.ಆದರೆ ಯಾರು ಇತ್ತ ಕಡೆ ಗಮನಹರಿಸದಿರುವುದೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವುದೇ ಸುರಕ್ಷತಾ ಪರಿಕರಗಳು, ಸೂಚನಾ ಫಲಕಗಳು ಇಲ್ಲವೇ ಇಲ್ಲ.ಅಲ್ಲದೇ ಕಾಮಗಾರಿ ಯಾವ ಯೋಜನಯಡಿ ನಡೆಯುತ್ತಿದೆ.ಎಷ್ಟು ಅನುದಾನ, ರಸ್ತೆಯ ಉದ್ದವೇಷ್ಟು ಎಂಬುದರ ನಾಮಫಲಕವಂತೂ ಇಲ್ಲ. ಸಾರ್ವಜನಿಕರ ಮಾಹಿತಿಗೆ ಕಾಮಗಾರಿ ಸಂದರ್ಭದಲ್ಲಿ ನಾಮಫಲಕ ಹಾಕಬೇಕು.ಆದರೆ ಇಲ್ಲಿ ಸುಮಾರು ಕಡೆಗಳಲ್ಲಿ ನಡೆಯುವ ಕಾಮಗಾರಿಗೆ ನಾಮಫಲಕ ಹಾಕುತ್ತಿಲ್ಲ ಅಧಿಕಾರಿಗಳು ಹೇಳುತ್ತಿಲ್ಲ. ಇಷ್ಟಾದರೂ ಅಧಿಕಾರಿಗಳು ಯಾರು ಕ್ರಮಕೈಗೊಳ್ಲುತ್ತಿಲ್ಲ. ಅಭಿವೃದ್ಧಿ ಬಗ್ಗೆ ಹೇಳುವ ರಾಜಕಾರಣಿಗಳು ಇತ್ತ ಕಣ್ಣೆತ್ತಿ ನೋಡದಿರುವುದು ಕಾಮಗಾರಿ ಪಡೆದ ಗುತ್ತಿಗೆದಾರನಿಗೆ ಅನುಕೂಲ ಕಲ್ಪಿಸಿದೆ. ಕೂಡಲೇ ರಸ್ತೆ ಕಾಮಗಾರಿ ನಡೆಸಿ ಸಾರ್ವಜನಿಕರ ಸುಲಭ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.

ಈ ಹಿಂದೆ ಇಲ್ಲಿನ ರಸ್ತೆಯಲ್ಲಿ ಸಾಕಷ್ಟು ತಗ್ಗುಗಳು ಉಂಟಾಗಿ ಸಂಚಾರಕ್ಕೆ ತೊಂದರೆಯಾಗುತ್ತಿತ್ತು.ಈಗ ಹೊಸ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.ಅದು ಕೂಡ ಅರ್ಧಕ್ಕೆ ನಿಲ್ಲಿಸಿರುವುದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ.ಇಲ್ಲಿನ ರಸ್ತೆ ಕಾಮಗಾರಿ ನೋಡಿದಾಗ ಗುತ್ತಿಗೆದಾರನಿಗೆ ರಸ್ತೆ ಮಾಡಿದ ಅನುಭವ ಇಲ್ಲ ಎಂದು ಕಾಣಿಸುತ್ತಿದೆ.ಮೊದಲಿದ್ದ ರಸ್ತೆಯ ಮೂಲಕ ಧೂಳಿಲ್ಲದೇ ಹರಸಾಹಸ ಪಟ್ಟು ಹೋಗುತ್ತಿದ್ದೆವು.ಈಗ ಅದಕ್ಕಿಂತಲೂ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೆವೆ.ಆದ್ದರಿಂದ ಕೂಡಲೇ ಕಾಮಗಾರಿ ಮುಗಿಸಿ ಅನುಕೂಲ ಮಾಡಿಕೊಡಿ

  • ಕಿರಣ ಕೋರೆ ಕಾಂಗ್ರೆಸ್ ಮುಖಂಡ