ಅರ್ಥ ಪೂರ್ಣ ಗಣರಾಜ್ಯೋತ್ಸವ ಆಚರಣೆ ಸಿದ್ಧ್ದತೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸೂಚನೆ

ಚಾಮರಾಜನಗರ, ಜ.06- ಜಿಲ್ಲಾಡಳಿತ ವತಿಯಿಂದ ಎಲ್ಲರ ಸಹಕಾರದೊಂದಿಗೆ ಗಣರಾಜ್ಯೋತ್ಸವವನ್ನು ಜನವರಿ 26 ರಂದು ಅರ್ಥ ಪೂರ್ಣವಾಗಿ ಆಚರಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರ ಅಧ್ಯಕ್ಷತೆಯಲ್ಲಿ ಗಣರಾಜ್ಯೋತ್ಸವ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಾರಿಯೂ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯ ಆರಂಭದಲ್ಲಿಯೇ ಗಣರಾಜ್ಯೋತ್ಸವ ಕಾರ್ಯಕ್ರಮ ಆಚರಣೆ ಕುರಿತು ಮುಖಂಡರು ಸಲಹೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಮುಖಂಡರು ಮಾತನಾಡಿ ಜಿಲ್ಲೆಯ ಎಲ್ಲಾ ಕೇಂದ್ರ ಕಚೇರಿಗಳು, ಬ್ಯಾಂಕುಗಳು, ಶಾಲಾ ಕಾಲೇಜುಗಳಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಬೇಕು. ಈ ಹಿಂದಿನಿಂದಲೂ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಬ್ಯಾಂಕುಗಳಲ್ಲಿ ಆಚರಿಸಬೇಕೆಂಬ ಒತ್ತಾಯ ಮಾಡಲಾಗುತ್ತಿದೆ. ಆದರೆ ಬ್ಯಾಂಕುಗಳು ನಿರ್ದೇಶನವನ್ನು ಪಾಲನೆ ಮಾಡುತ್ತಿಲ್ಲ ಎಂದು ಗಮನಕ್ಕೆ ತಂದರು.
ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಇಡಬೇಕು, ಕೊರೊನಾ ಸಂದರ್ಭದಲ್ಲಿ ವಿಶೇಷವಾಗಿ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಗೌರವಿಸಬೇಕು. ಕಡ್ಡಾಯವಾಗಿ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾಗಬೇಕು. ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ಸಹಕಾರ ನೀಡುವುದಾಗಿ ಮುಖಂಡರು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಮಾತನಾಡಿ ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವ ಆಚರಣೆಯನ್ನು ಅರ್ಥ ಪೂರ್ಣವಾಗಿ ಆಯೋಜಿಸಲು ಸಕಲ ಸಿದ್ದತೆ ಮಾಡಲಾಗುತ್ತದೆ. ಕಾರ್ಯಕ್ರಮದ ಸುಗಮ ನಿರ್ವಹಣೆಗೆ ಅಧಿಕಾರಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಿದ್ದು ಹೊಣೆಗಾರಿಕೆ ನೀಡಲಾಗುತ್ತದೆ ಎಂದರು.
ಕೋವಿಡ್ ಶಿಷ್ಟಾಚಾರವನ್ನು ಪಾಲನೆ ಮಾಡಬೇಕು. ಕಾರ್ಯಕ್ರಮದ ಏರ್ಪಾಡು ಅಚ್ಚುಕಟ್ಟಾಗಿ ಆಗಬೇಕು. ಯಾವುದೇ ಲೋಪಕ್ಕೆ ಅವಕಾಶವಾಗಬಾರದು. ದೇಶಭಕ್ತಿ ಪ್ರಧಾನ ಆಧಾರಿತ ಕಾರ್ಯಕ್ರಮಗಳ ಆಯೋಜನೆಗೆ ಪೂರ್ವಭಾವಿ ಸಿದ್ದತೆಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಗಣರಾಜ್ಯೋತ್ಸವ ಆಚರಣೆಗೆ ಕ್ರಮ ತೆಗೆದುಕೊಳ್ಳಬೇಕು. ಬ್ಯಾಂಕುಗಳಿಗೆ ಸುತ್ತೋಲೆ ಹೊರಡಿಸಿ ಆಚರಣೆಗೆ ಸೂಚನೆ ನೀಡಬೇಕು, ಗಣರಾಜ್ಯೋತ್ಸವ ಆಚರಿಸದೆ ಇರುವ ಬ್ಯಾಂಕುಗಳ ವರದಿಯನ್ನು ನೀಡಬೇಕು. ಇಂತಹ ಬ್ಯಾಂಕುಗಳ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಈ ಬಗ್ಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಖುದ್ದು ಗಮನಹರಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್, ಮುಖಂಡರಾದ ಚಾ.ರಂ. ಶ್ರೀನಿವಾಸಗೌಡ, ಚಾ.ಗು. ನಾಗರಾಜು, ಕೆ.ಎಂ. ನಾಗರಾಜು, ನಿಜಧ್ವನಿ ಗೋವಿಂದರಾಜು, ಸಿ.ಎಂ. ಶಿವಣ್ಣ, ಸುರೇಶ್ ವಾಜಪೇಯಿ, ನಾರಾಯಣ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.