ಅರ್ಥಪೂರ್ಣ ಹೊಸ ವರ್ಷಾಚರಣೆ ಇಂದಿನ ಅಗತ್ಯ

ಕಲಬುರಗಿ.ಜ.01: ಪಾಶ್ಚಿಮಾತ್ಯ ಸಂಸ್ಕøತಿಯ ಪ್ರಭಾವದಿಂದ ಕ್ಯಾಲೆಂಡರ್ ವರ್ಷವೇ ಹೊಸ ವರ್ಷವಾಗಿ ಬಿಟ್ಟಿದೆ. ಎಲ್ಲೆಡೆ ವಿಪರೀತ ಪಟಾಕಿ ಸಿಡಿಸುವುದು, ಮಿತಿಮೀರಿ ಮದ್ಯಪಾನ ಸೇವಿಸಿ ಕುಣಿದು ಕುಪ್ಪಳಿಸುವುದು, ಶಾಂತಿ-ಸಾಮರಸ್ಯವನ್ನು ಕದಡುವ ಸಂದರ್ಭ, ಪಟಾಕಿ ಸದ್ದಿನಲ್ಲಿ ಮಲೀನ ಹೊಗೆಯನ್ನು ಸೇವಿಸುತ್ತ ಜನರು ಚಲಿಸುವಂತ ಪರಸ್ಥಿತಿ, ಸಂಪೂರ್ಣ ಕುಡಿದು ವಾಹನ ಚಲಾಯಿಸಿ ಅಪಘಾತವಾಗಿ ನಿಧನವಾಗುವ, ಕಣ್ಣು ಕಳೆದುಕೊಳ್ಳುವಂತಹ ಮುಂತಾದ ಅವಘಡಗಳು ಪ್ರತಿ ವರ್ಷ ಸಂಭವಿಸುತ್ತಲಿವೆ. ಇಂತಹ ಅಂಧಾನುಕರಣೆಯ ಆಚರಣೆಯಿಂದ ಹೊರಬಂದು, ಅರ್ಥಪೂರ್ಣವಾದ ಆಚರಣೆ ಇಂದಿನ ಅಗತ್ಯವಾಗಿದೆಯೆಂದು ಚಿಂತಕ ನರಸಪ್ಪ ಬಿರಾದಾರ ದೇಗಾಂವ ಹೇಳಿದರು.
ಅವರು ನಗರದ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯಲ್ಲಿರುವ ‘ಮಹಾದೇವಿ ತಾಯಿ ವೃದ್ಧಾಶ್ರಮ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಸಂಜೆ ಸಮರ್ಥ ಅವರ ಜನ್ಮದಿನ ಹಾಗೂ ಹೊಸ ವರ್ಷಾಚರಣೆ ಪ್ರಯುಕ್ತ ಎಲ್ಲಾ ವಯೋವೃದ್ಧರಿಗೆ ಹಣ್ಣುಗಳನ್ನು ವಿತರಿಸಿ, ಅವರಿಗೆ ಮಾನಸಿಕ ಸ್ಥೈರ್ಯ ನೀಡುವ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಹೊಸ ವರ್ಷಾಚರಣೆ ನೆಪದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಸಮಾಜಮುಖಿ ಕಾರ್ಯಗಳನ್ನು ಮಾಡಬೇಕಾಗಿದೆ. ಅಶಕ್ತರು, ಬಡವರು, ದುರ್ಬಲರು, ಅನಾಥರು, ರೈತರಿಗೆ ಸಹಾಯ ಮಾಡುವುದು, ಮಕ್ಕಳಿಗೆ ದೇಶಿಯ ಸಂಸ್ಕøತಿ ಬೆಳೆಸುವುದು, ಹಿರಿಯರು, ವೃದ್ಧರು, ಹತಾಶಿತರಿಗೆ ಮಾನಸಿಕ ಧೈರ್ಯವನ್ನು ನೀಡುವುದು, ರೋಗಿಗಳಿಗೆ, ಬಡವರಿಗೆ, ಆಹಾರ,ಬಟ್ಟೆ, ಹಣ್ಣು ಹಂಪಲುಗಳನ್ನು ನೀಡುವುದು, ವಿಕಲಚೇತನರು, ಅಂಧ, ಮೂಕ, ಕಿವುಡದಂತಹ ದೋಷವುಳ್ಳ ವ್ಯಕ್ತಿಗಳಿಗೆ ಅವರ ಬಾಳಿನಲ್ಲಿ ಸಂತೋಷವನ್ನು ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅವಶ್ಯಕವಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸೋಮಶೇಖರ ಬಿ.ಮೂಲಗೆ, ಬಸವರಾಜ ಎಸ್.ಪುರಾಣೆ, ರಾಜಕುಮಾರ ಬಟಗೇರಿ, ಸಮರ್ಥ ಎನ್.ಬಿರಾದಾರ, ಲಕ್ಷ್ಮೀಕಾಂತ ಮೇತ್ರೆ, ಶರಣಬಸಪ್ಪ ವಗ್ಗಾಲೆ, ಶಾಂತವೀರ ಎಂ.ಪಾಟೀಲ ಸೇರಿದಂತೆ ವೃದ್ಧಾಶ್ರಮದ ಸಿಬ್ಬಂದಿ, ವೃದ್ದರು ಭಾಗವಹಿಸಿದ್ದರು.