ಅರ್ಥಪೂರ್ಣ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಡಿಸಿ ಸೂಚನೆ

ಕೋಲಾರ, ನ,೨೯-ಯಾವುದೇ ಇಲಾಖೆಯಿಂದ ಮಾಡುವ ಕೆಲಸ ಅರ್ಥಪೂರ್ಣವಾಗಿರಬೇಕು, ಮಕ್ಕಳ ಹಾಗೂ ಮಹಿಳೆಯರ ರಕ್ಷಣೆಗಾಗಿ ಜಾರಿಯಾಗಿರುವ ಕಾನೂನುಗಳನ್ನು ಸಮರ್ಪಕವಾಗಿ ಅನುಷನಕ್ಕೆ ತಂದಾಗ ಸಂಭವಿಸುವ ಅನಾಹುತಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.
ನಗರ ಹೊರವಲಯದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ , ಬೆಂಗಳೂರು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ’ಮಕ್ಕಳ ಪೋಷಣೆ ಮತ್ತು ರಕ್ಷಣೆಯ ವಿವಿಧ ಅಯಾಮಗಳ ಕುರಿತು ಜಿಲ್ಲಾ ಮಟ್ಟದ ಒಂದು ದಿನ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಇಲಾಖೆಯ ಅಧಿಕಾರಿಗಳು ಸಭೆಗಳಲ್ಲಿ ಕಾಟಾಚಾರಕ್ಕೆ ಪ್ರೋಸಿಡಿಂಗ್ಸ್ ಮಾಡಬಾರದು, ಮಾಡುವ ಕೆಲಸ ಅರ್ಥಪೂರ್ಣವಾಗಿ ಇರಬೇಕು. ಹಲವು ಸಭೆಗಳನ್ನು ಮಾಡುತ್ತೇವೆ, ಆದರೆ ಅಧಿಕಾರಿಗಳು, ಸಿಬ್ಬಂದಿ ಉದ್ದೇಶ ಮರೆತಿರುತ್ತಾರೆ. ಮಹಿಳೆಯರು, ಮಕ್ಕಳ ರಕ್ಷಣೆಗಾಗಿ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಕಾನೂನುಗಳ ಸೆಕ್ಷನ್ ಬಗ್ಗೆ ಮಾಹಿತಿ ಹೊಂದಿರಬೇಕು. ಕಾನೂನುಗಳನ್ನು ಬಳಕೆ ಮಾಡುವಾಗ ಎಚ್ಚರಿಕೆ ವಹಿಸಬೇಕೆಂದರು.
ಬಾಲ ನ್ಯಾಯ ಕಾಯ್ದೆ, ಪೋಕ್ಸೊ ಕಾಯ್ದೆಗಳು ಬಹಳ ಬಲಿಷವಾಗಿದ್ದರು ಕೆಲ ಸಂದರ್ಭಗಳಲ್ಲಿ ಮಹಿಳೆಯರ, ಮಕ್ಕಳ ಮೇಲೆ ದೌರ್ಜನ್ಯ, ಶೋಷಣೆಯಂತ ಪ್ರಕರಣಗಳು ನಡೆಯುತ್ತಿವೆ ಎಂದರೆ ಅರಿವಿನ ಕೊರತೆಯಿದೆ ಎಂಬ ಅರ್ಥ, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಆಗುತ್ತಿರುವ ಘಟನೆಗಳನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿ, ಮಕ್ಕಳ ಪಾಲನಾ ಸಂಸ್ಥೆಗಳು, ಬಾಲಮಂದಿರ ಹೀಗೆ ಅನೇಕ ಸಮಿತಿಗಳಿದ್ದು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ಅವರು ಮಾತನಾಡಿ, ಕಾನೂನುಗಳನ್ನು ಜಾರಿಗೆ ತಂದಿದ್ದರು ನಿರಂತರವಾಗಿ ಕಾನೂನುಗಳು ಜಾರಿಗೆ ಬಂದಿದ್ದರು ಉಲ್ಲಂಘನೆಯಾಗುತ್ತಿವೆ ಎಂದು ವಿಷಧಿಸಿದರು.
ಇತ್ತೀಚಿಗೆ ಕೋಲಾರದಲ್ಲಿ ನಡೆದ ಘಟನೆಗಳನ್ನು ಗಮನಿಸಿದರೆ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫಲವಾಗಿದ್ದೇವೆ ಎಂಬ ಭಾವನೆ ಕಾಡುತ್ತಿದೆ. ಬಾಲ ಮಂದಿರ, ಮಕ್ಕಳ ಸಮಿತಿಗಳು ರಚನೆಯಾಗಿದ್ದರು ಅನುಷನಕ್ಕೆ ತರುವಲ್ಲಿ ವಿಫಲವಾಗಿದ್ದೇವೆ. ಮಕ್ಕಳ ಬೆಳವಣಿಗೆ, ಮಾದಕ ವಸ್ತುಗಳ ಸೇವನೆ, ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹ ನಿರ್ಮೂಲನೆ ಜವಾಬ್ದಾರಿ ಕೇವಲ ಇಲಾಖೆಯ ಮೇಲಿಲ್ಲ. ಇತರೆ ಇಲಾಖೆಗಳ ಪಾತ್ರವು ಪ್ರಮುಖ. ಕೆಲಸವನ್ನು ಇಚ್ಛೆಯಿಂದ ಮಾಡಬೇಕು ಉದಾಸೀನ ತೋರಬಾರದು ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷಧಿಕಾರಿ ಭಾಸ್ಕರ್ ಅವರು ಮಾತನಾಡಿ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರೆ ಎಲ್ಲೊ ಒಂದು ಕಡೆ ಸಮಸ್ಯೆ ಇದೆ ಎಂಬ ಭಾವನೆ ವ್ಯಕ್ತವಾಗುತ್ತದೆ. ವಿದ್ಯಾರ್ಥಿ ಕಾರ್ತಿಕ್ ಸಿಂಗ್‌ನ್ನು ಕೊಲೆ ಮಾಡಿರುವುದು ಅಪ್ರಾಪ್ತರೆ, ಅತಿಯಾಗಿ ಮದ್ಯ ಸೇವನೆ ಮಾಡಿ, ಅಡ್ಡ ಸಹವಾಸದಿಂದ ಕೃತ್ಯ ಸಂಭವಿಸಿದೆ. ಇಂತಹ ಪ್ರಕರಣಗಳು ಮರುಕಳುಹಿಸದಂತೆ ಪ್ರತಿಯೊಬ್ಬರು ಎಚ್ಚರವಹಿಸಬೇಕು ಎಂದು ತಿಳಿಸಿದರು.
ಎಲ್ಲಾ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮಕ್ಕಳ ಹಕ್ಕುಗಳ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಲು ಈ ರೀತಿಯ ಕಾರ್ಯಕ್ರಮವನ್ನು ರಾಜ್ಯದಲ್ಲಿ ಮೊದಲನೇಯದಾಗಿ ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಕೋಲಾರ ಜಿಲ್ಲೆಯಲ್ಲಿ ಏರ್ಪಡಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕೋಲಾರ ತಾಲ್ಲೂಕಿನ ತೊರದೇ ವಂಡಹಳ್ಳಿ ಗ್ರಾಮ ಪಂಚಾಯಿತಿ ಮುರಾಂಡಹಳ್ಳಿ ಅಂಗನವಾಡಿ ಕಾರ್ಯಕರ್ತೆ ಸಿ. ಲಕ್ಷಮ್ಮ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಉನ್ನತ ಸಮಿತಿ ಸದಸ್ಯ ವಿಲಿಯಂ ಕ್ರಿಸ್ಟೋಫರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಚೌಡಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎನ್.ನಾರಾಯಣಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ರಾಮಚಂದ್ರಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ. ವಿ. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭ, ವಿನೋದ್ ಕುಮಾರ್, ಮಹಿಳಾ ಪರ ಹೋರಾಟಗಾರರಾದ ಮಮತಾ ರೆಡ್ಡಿ, ಗೀತಾ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.