ಅರ್ಥಪೂರ್ಣ ಆಚರಣೆ ಪ್ರಸ್ತುತ ಅಗತ್ಯ

ಕಲಬುರಗಿ:ನ.13:ಯಾವುದೇ ವ್ಯಕ್ತಿಯ ಜನ್ಮದಿನಾಚರಣೆ, ಆಚರಿಸುವ ಹಬ್ಬ, ಉತ್ಸವಗಳು ತನಗೆ ಆತ್ಮತೃಪಿ ನೀಡುವುದರ ಜೊತೆಗೆ ಸಮಾಜ ಹಿತಕ್ಕೆ ಪೂರಕವಾಗಿರಬೇಕು. ಸಮಾಜದಲ್ಲಿರುವ ಬಡವರು, ಅಶಕ್ತರಲ್ಲಿ ದೇವರನ್ನು ಕಾಣುವ ಪ್ರವೃತ್ತಿ ಬೆಳೆಸಿಕೊಂಡು ಅವರಿಗೆ ಸಹಾಯಹಸ್ತವನ್ನು ಚಾಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಮನೋಭಾವನೆ ಬೆಳೆಯುವುದು ಪ್ರಸ್ತುತ ತುಂಬಾ ಅಗತ್ಯವಾಗಿದೆಯೆಂದು ಶ್ರೀನಿವಾಸ ಸರಡಗಿಯ ಚಿಕ್ಕವೀರೇಶ್ವರ ಸಂಸ್ಥಾನ ಮಠದ ಪರಮಪೂಜ್ಯ ಡಾ.ರೇವಣಸಿದ್ದ ಶಿವಾಚಾರ್ಯರು ಸಲಹೆ ನೀಡಿದರು.

    ಸಮಾಜ ಸೇವಕ ಎಚ್.ಬಿ.ಪಾಟೀಲ ಅವರ 40ನೇ ಜನ್ಮದಿನದ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ನಗರದ ರಾಮತೀರ್ಥ ದೇವಸ್ಥಾನದ ಸಮೀಪದಲ್ಲಿ ವಾಸಿಸುತ್ತಿರುವ ಕೊಳಗೇರಿ ಪ್ರದೇಶದ ಅಲೆಮಾರಿ ಜನಾಂಗದವರಿಗೆ ಚಳಿಗಾಲವಿರುವದರಿಂದ ಶುಕ್ರವಾರ ಹೊದಿಕೆಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡುತ್ತಿದ್ದರು.

   ಎಚ್.ಬಿ.ಪಾಟೀಲ ಅವರು ಉಪನ್ಯಾಸಕರಾಗಿದ್ದುಕೊಂಡು ತಮ್ಮ ವೃತ್ತಿಯ ಜೊತೆಗೆ ನಿರಂತರವಾಗಿ  ಸಾವಿರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸದಾ ತಮ್ಮನ್ನು ತಾವೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿಸ್ವಾರ್ಥ ಸಮಾಜ ಸೇವಕರಾಗಿ ಸಮಾಜಕ್ಕೆ ಕಳೆದ ಅನೇಕ ವರ್ಷಗಳಿಂದ ಕೊಡುಗೆಯನ್ನು ನೀಡುತ್ತಿದ್ದು, ‘ಸಮಾಜ ಸೇವೆಯ ಪ್ರತಿನಿಧಿ’ಯಾಗಿದ್ದಾರೆ. ಇವರ ಸಮಾಜ ಸೇವೆಗೆ ಪ್ರೋತ್ಸಾಹ ನೀಡುವುದು ಅವಶ್ಯಕವಾಗಿದೆಯೆಂದರು.

  ಬಳಗದ ಕಾನೂನು ಸಲಹೆಗಾರ, ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡಿ, ಎಚ್.ಬಿ.ಪಾಟೀಲ ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡದೆ, ಸಮಾಜ ಸೇವೆಗೆ ಒತ್ತನ್ನು ನೀಡಿರುವುದು ಗಮನಿಸದರೆ, ಅವರಲ್ಲಿರುವ ಸಮಾಜಪರ ಕಾಳಜಿ ತಿಳಿಯುತ್ತದೆ. ಅವರು ಚುನಾವಣೆ ಸ್ವರ್ಧಿಸಬೇಕು, ಯಾವುದೇ ವ್ಯಕ್ತಿ, ಸಂಸ್ಥೆಗಳಿಂದ ಏನಾದರೂ ನಿರೀಕ್ಷೆ ಮಾಡದೆ, ನಿಸ್ವಾರ್ಥ ಸಮಾಜ ಸೇವೆಯೆ ಅವರ ಗುರಿಯಾಗಿದೆ. ಇಂದಿನ ದಿವಸಗಳಲ್ಲಿ ಮೋಜು-ಮಸ್ತಿ, ಸಿಹಿ ತಿನ್ನುವುದಕ್ಕೆ ಸೀಮಿತವಾದ ಜನ್ಮದಿನಾಚರಣೆ ಸಂದರ್ಭದಲ್ಲಿ, ಇದಕ್ಕೆ ವಿಭಿನ್ನವಾಗಿ ಅನಾಥರು, ನಿರಾಶ್ರಿತರ ಜೊತೆಗೆ ಅವರಿಗೆ ಕೈಲಾದ ಸೇವೆಯನ್ನು ಸಲ್ಲಿಸುವ ಮೂಲಕ ಆಚರಿಸುತ್ತಿರುವ ಪದ್ಧತಿ ಸಮಾಜಕ್ಕೆ ಮಾದರಿಯಾಗಿದೆಯೆಂದು ಮಾರ್ಮಿಕವಾಗಿ ನುಡಿದರು.

  ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಸಂಜೀವಕುಮಾರ ಶೆಟ್ಟಿ, ಬಸವರಾಜ ಕುಲಕರ್ಣಿ ನಾವದಗಿ, ಸೋಮಶೇಖರ ಬಿ.ಮೂಲಗೆ, ಬಸವರಾಜ ಹೆಳವರ ಯಾಳಗಿ, ಬಸಯ್ಯಸ್ವಾಮಿ ಹೊದಲೂರ, ಬಸವರಾಜ ಎಸ್.ಪುರಾಣೆ, ದೇವೇಂದ್ರಪ್ಪ ಗಣಮುಖಿ, ರಾಜಕುಮಾರ ಬಟಗೇರಿ, ಎಸ್.ಎಸ್.ಪಾಟೀಲ ಬಡದಾಳ, ಪ್ರಕಾಶ ಸುರ್ವಾಸೆ, ಅಮರ ಜಿ.ಬಂಗರಗಿ ಸೇರಿದಂತೆ ಬಳಗದ ಸದಸ್ಯರು, ಕೊಳಗೇರಿ ಪ್ರದೇಶದ ಹಲವಾರು ಜನರು ಭಾಗವಹಿಸಿದ್ದರು.