ಅರ್ಥಪೂರ್ಣವಾಗಿ ಯೋಗ ದಿನಾಚರಣೆ

ಸಂಜೆವಾಣಿ ನ್ಯೂಸ್
ಮೈಸೂರು: ಜೂ.15:- ವಿಶ್ವ ಯೋಗ ದಿನಾಚರಣೆಯನ್ನು ಜೂ.21ರಂದು ಅರಮನೆ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಮಾನ್ಯ ಮೈಸೂರು ಕೊಡಗು ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಿಳಿಸಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾನು ಪ್ರತಿ ವರ್ಷ ಯೋಗ ದಿನಾಚರಣೆಯಲ್ಲಿ ಭಾಗವಹಿಸುತ್ತೇನೆ. ಸರ್ಕಾರದಿಂದ ನೀಡಿರುವ 1 ಲಕ್ಷ ಅನುದಾನದ ಜತೆಗೆ ವಿವಿಧ ದಾನಿಗಳಿಂದ ಅನುದಾನ ಪಡೆದು ಆ ಅನುದಾನವನ್ನು ಬಳಕೆ ಮಾಡಿ ಉತ್ತಮವಾಗಿ ಯೋಗ ದಿನಾಚರಣೆ ಆಯೋಜನೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಜೂ.21ರಂದು ವಿಶ್ವ ಯೋಗ ದಿನಾಚರಣೆ ಆಚರಿಸಲಾಗುತ್ತದೆ. ಮೈಸೂರಿನ ಯೋಗ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ರಾಜ್ಯ ಸರ್ಕಾರದಿಂದ ಜಿಲ್ಲಾ ಮಟ್ಟಕ್ಕೆ ಯೋಗ ದಿನಾಚರಣೆ ಆಯೋಜನೆಗೆ 1 ಲಕ್ಷ ಅನುದಾನ ಬರುತ್ತದೆ.
ಯೋಗವನ್ನು ಅರಮನೆಯ ಮುಂಭಾಗದಲ್ಲಿ ಆಯೋಜನೆ ಮಾಡಲಾಗುವುದು. ಅಂದು ಬೆಳಗ್ಗೆ 7 ಗಂಟೆಗೆ ಯೋಗ ಪ್ರಾರಂಭವಾಗುವುದು. ಕನಿಷ್ಠ 10 ಸಾವಿರ ಯೋಗಪಟುಗಳು ಭಾಗವಹಿಸುವರು ಎಂದರು.
ಸರ್ಕಾರದ ಶಿಷ್ಟಾಚಾರ ಪಾಲನೆ ಮಾಡಿ ಯೋಗ ದಿನಾಚರಣೆ ಆಯೋಜನೆ ಮಾಡಲಾಗುವುದು. ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಲಾಗುವುದು. ವೇದಿಕೆ ಕಾರ್ಯಕ್ರಮ ಬೆಳಗ್ಗೆ 6.30ಕ್ಕೆ ಪ್ರಾರಂಭವಾಗುವುದು. ಅಚ್ಚುಕಟ್ಟಾಗಿ ಯೋಗ ದಿನಾಚರಣೆ ಆಯೋಜನೆಗೆ ವಿವಿಧ ಇಲಾಖೆಗಳಿಗೆ ನಿಯೋಜಿಸುವ ಕಾರ್ಯಗಳನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ವಿವಿಧ ಯೋಗ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.