
ಸಂಜೆವಾಣಿ ನ್ಯೂಸ್
ಮೈಸೂರು,ಆ.15:- ಈ ಬಾರಿ ಅರ್ಥ ಪೂರ್ಣವಾಗಿ ಅದ್ದೂರಿ ದಸರಾ ಆಚರಣೆ ಮಾಡಲಾಗುವುದು. ದಸರಾ ಆಚರಣೆಗೆ ಯಾವುದೇ ಕೊರತೆ ಅಗದಂತೆ ನೋಡಿಕೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ ಮಹದೇವಪ್ಪ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಸರಾ ಆಚರಣೆ ಸಂಬoಧ ಹಮ್ಮಿಕೊಂಡಿದ್ದ ದಸರಾ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೆಪ್ಟೆಂಬರ್ 1 ರಂದು ಧಾರ್ಮಿಕ ವಿಧಿವಿಧಾನಗಳಿಂದ ಬೆಳಗ್ಗೆ 9 ಗಂಟೆಗೆ ವೀರನಹೊಸಹಳ್ಳಿಯಲ್ಲಿ ಗಜಪಯಣ ಆರಂಭವಾಗುತ್ತದೆ. ಇದರಲ್ಲಿ 7 ಗಂಡು ಆನೆಗಳು ಹಾಗೂ 2 ಹೆಣ್ಣು ಆನೆಗಳು ಆಯ್ಕೆಯಾಗಿವೆ. ಉಳಿದ 5 ಆನೆಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 14 ಆನೆಗಳು ದಸರಾದಲ್ಲಿ ಭಾಗವಹಿಸುತ್ತವೆ ಎಂದು ಮಾಹಿತಿ ನೀಡಿದರು.
ದಸರಾ ವಿಶ್ವ ವಿಖ್ಯಾತವಾಗಿರುವುದರಿಂದ ಪ್ರಪಂಚದ ಮೂಲೆ ಮೂಲೆಯಿಂದ ಜನರು ದಸರಾಕ್ಕೆ ಬರುತ್ತಾರೆ. ಮೈಸೂರು ದಸರಾ ಹಬ್ಬವು ಕ್ರೀಡೆ, ಸಾಹಿತ್ಯ, ಪೆÇಲೀಸ್ ಬ್ಯಾಂಡ್, ಪಂಜಿನ ಕವಾಯತು ಸೇರಿದಂತೆ ಹಲವಾರು ವಿಷಯಗಳಿಗೆ ಹೆಸರುವಾಸಿಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ರಸ್ತೆಗಳನ್ನು ಉತ್ತಮ ಪಡಿಸಬೇಕು. ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ದಸರಾ ಹಬ್ಬದಲ್ಲಿ ಮೈಸೂರು ನಗರವು ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ ಹಾಗೂ ರಾಜರ ವೈಭವವನ್ನು ಬಿಂಬಿಸುವoತೆ ಇರಬೇಕು. ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಆಯೋಜನೆ ಮಾಡಬೇಕು ಎಂದು ತಿಳಿಸಿದರು.
ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಕೆ. ವೆಂಕಟೇಶ್ ಅವರು ಮಾತನಾಡಿ ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾಂಪ್ರದಾಯಿಕ ದಸರಾ ಆಚರಣೆ ಮಾಡಲು ಹೆಚ್ಚಿನ ಒತ್ತು ನೀಡಬೇಕು ಎಂದರು.
ಸoಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ ದೀಪಾಲಂಕಾರ 100 ಕಿ.ಮೀ ಗೂ ಹೆಚ್ಚು ಇರುತ್ತದೆ. ಇದು ದಸರಾದ ಪ್ರಮುಖ ಆಚರಣೆ. ಜಂಬೂ ಸವಾರಿ ಹೊರತುಪಡಿಸಿ ಇತರೆ ಕಾರ್ಯಕ್ರಮಗಳಿಗೆ ಪಾಸ್ ವ್ಯವಸ್ಥೆ ಬೇಡ. ಎಲ್ಲರಿಗೂ ಮುಕ್ತ ಅವಕಾಶ ಇರಲಿ. ಕ್ರೀಡಾ ದಸರಾಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ ಕಳೆದ ಬಾರಿ 16 ದಸರಾ ಉಪಸಮಿತಿಗಳನ್ನು ರಚಿಸಲಾಗಿತ್ತು. ಈ ಬಾರಿ ಅವಶ್ಯಕತೆ ಇದ್ದಲ್ಲಿ 03 ಹೆಚ್ಚುವರಿ ಉಪಸಮಿತಿಗಳನ್ನು ಹೆಚ್ಚಾಗಿ ರಚಿಸಲಾಗುವುದು ಎಂದು ತಿಳಿಸಿದರು.
ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಟಿ ದೇವೇಗೌಡ ಅವರು ಮಾತನಾಡಿ ಮೈಸೂರು ಅರಸರ ಗತ ಕಾಲದ ವೈಭವ ಸಾರುವ ಕಾರ್ಯಕ್ರಮಗಳು ಆಗಬೇಕು. ದಸರಾದಲ್ಲಿ ದೀಪಾಲಂಕಾರ ಆಕರ್ಷಣೀಯವಾಗಿರಬೇಕು. ದಸರಾ ವಸ್ತು ಪ್ರದರ್ಶನ ದೀರ್ಘಕಾಲ ಇರಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್ ಅವರು ಮಾತನಾಡಿ ದಸರಾದಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೇವಲ ಸೆಲೆಬ್ರಿಟಿಗಳನ್ನು ಕರೆಸಿ ದಸರಾ ಆಚರಣೆ ಮಾಡುವುದನ್ನು ಕಡಿಮೆ ಮಾಡಿ, ಸ್ಧಳೀಯ ಪ್ರತಿಭಾವಂತ ಕಲಾವಿದರಿಗೆ ಆದ್ಯತೆ ನೀಡಬೇಕು. ಸಾಂಸ್ಕೃತಿಕ ದಸರಾದಲ್ಲಿ ಆದಿವಾಸಿಗಳ ಕಾರ್ಯಕ್ರಮಕ್ಕೆ ಆದ್ಯತೆ ನೀಡಬೇಕು ಎಂದರು.
ಹುಣಸೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹರೀಶ್ ಗೌಡ ಅವರು ಮಾತನಾಡಿ ಯುವ ದಸರಾ ಹಾಗೂ ಯುವ ಸಂಭ್ರಮದಲ್ಲಿ ಯಾವುದೇ ಕೊರತೆಯಾಗದಂತೆ ಕಾರ್ಯಕ್ರಮ ನಡೆಯಬೇಕು. ಕ್ರೀಡಾ ದಸರಾ ಹೆಚ್ಚು ವ್ಯವಸ್ಧಿತವಾಗಿ ಆಯೋಜನೆಯಾಗಬೇಕು ಎಂದರು.
ಸಭೆಯಲ್ಲಿ ಮೇಯರ್ ಶಿವಕುಮಾರ್, ಶಾಸಕರಾದ ಶ್ರೀವತ್ಸ, ಡಿ ರವಿಶಂಕರ್, ದರ್ಶನ್ ಧೃವ ನಾರಾಯಣ್, ರಮೇಶ್ ಬಂಡಿ ಸಿದ್ದೇಗೌಡ, ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಸೆಲ್ವ ಕುಮಾರ್, ನಗರ ಪೆÇಲೀಸ್ ಆಯುಕ್ತರಾದ ಬಿ ರಮೇಶ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಆಶಾದ್ ಉರ್ ರೆಹಮಾನ್ ಶರೀಫ್ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.