ಅರ್ಜೆಂಟೀನಾ, ಮಾ ೨೩- ಅರ್ಜೆಂಟೀನಾ, ತಜಕಿಸ್ತಾನದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕದಿಂದ ಮನೆ ಯಿಂದ ಓಡಿ ಬಂದ ಘಟನೆ ನಡೆದಿದೆ.
ದಕ್ಷಿಣ ಅಮೆರಿಕ ಖಂಡದ ದೇಶವಾದ ಅರ್ಜೆಂಟೀನಾದ ಸ್ಯಾನ್ ಆಂಟೋನಿಯೊ ಡಿ ಲಾಸ್ ಕೋಬ್ರೆಸ್ ಮತ್ತು ಮಧ್ಯ ಏಷ್ಯಾದ ತಜಕಿಸ್ತಾನದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ ೬.೫, ೫.೯ ತೀವ್ರತೆ ದಾಖಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.
ಅರ್ಜೆಂಟೀನಾದಲ್ಲಿ ನಿನ್ನೆ ರಾತ್ರಿ ೮.೩೦ ರ ಸುಮಾರಿನಲ್ಲಿ ಭೂಮಿ ಕಂಪಿಸಿದೆ. ಸ್ಯಾನ್ ಆಂಟೋನಿಯೊ ಡಿ ಲಾಸ್ ಕೋಬ್ರೆಸ್‌ನಿಂದ ೮೪ ಕಿಮೀ ದೂರದ ಉತ್ತರ ಪ್ರದೇಶದಲ್ಲಿಭೂಮಿ ಕಂಪಿಸಿದೆ. ೨೧೦ ಕಿ.ಮೀ ಆಳದಲ್ಲಿ ಕಂಪನದ ಅಲೆಗಳು ಎದ್ದಿವೆ. ರಿಕ್ಟರ್ ಮಾಪಕದಲ್ಲಿ ೬.೫ ತೀವ್ರತೆ ದಾಖಲಾಗಿದೆ ಎಂದು ಯುಎಸ್ಜಿಎಸ್ ತಿಳಿಸಿದೆ.
ಇನ್ನೊಂದೆಡೆ, ತಜಕಿಸ್ತಾನದಲ್ಲಿ ರಿಕ್ಟರ್ ಮಾಪಕದಲ್ಲಿ ದಾಖಲಾದಂತೆ ೫.೯ ತೀವ್ರತೆಯ ಭೂಕಂಪನ ಸಂಭವಿಸಿದೆ. ಇಲ್ಲಿನ ನೊವೊಬೋಡ್‌ನಿಂದ ೫೧ ಕಿಮೀ ದೂರದ ವಾಯುವ್ಯ ಭಾಗದಲ್ಲಿ ಕಂಪನ ಉಂಟಾಗಿದೆ.
ಭೂಕಂಪವು ೦೧:೩೭ ರ ಸುಮಾರಿನಲ್ಲಿ ಸಂಭವಿಸಿದೆ. ನೊವೊಬೋಡ್‌ನ ೫.೬ ಕಿಮೀ ಆಳದಲ್ಲಿ ಅಲೆಗಳು ಎದ್ದಿವೆ. ಆದರೆ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ ಎನ್ನಲಾಗಿದೆ.