ಅರ್ಜಿಗಳ ಶೀಘ್ರ ವಿಲೇವಾರಿಗೆ ಸೂಚನೆ

ಗದಗ ಏ 28: ಸಕಾಲ ಯೋಜನೆಯ ಅನುಷ್ಟಾನದಲ್ಲಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಲು ಎಲ್ಲ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ವಿಲೇ ಮಾಡುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಕಾಲ ಯೋಜನೆಯ ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಕಾಲದಲ್ಲಿ ಅರ್ಜಿ ಸ್ವೀಕರಿಸುವಾಗ ಅರ್ಜಿಯ ಜೊತೆಗೆ ನಿಗದಿಪಡಿಸಿದ ದಾಖಲಾತಿಗಳ ಸಮೇತ ಸ್ವೀಕರಿಸಬೇಕು. ಸಕಾಲ ಯೋಜನೆಯಡಿ ಇಲಾಖೆಗಳಿಗೆ ನಿಗದಿಪಡಿಸಿದ ಯೋಜನೆಗಳಲ್ಲಿ ಕಡ್ಡಾಯವಾಗಿ ಅರ್ಜಿಗಳನ್ನು ಸ್ವೀಕರಿಸಬೇಕು. ವಿನಾಕಾರಣ ಸ್ವೀಕರಿಸಿದ ಅರ್ಜಿಗಳನ್ನು ತಿರಸ್ಕಾರ ಮಾಡಬಾರದು. ಹಾಗೂ ಸ್ವೀಕರಿಸಿದ ಅರ್ಜಿಗಳಿಗೆ ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ಅಧಿಕಾರಿಗಳು ಸಕಾಲ ಯೋಜನೆ ಕುರಿತು ಹೆಚ್ಚು ನಿಗಾ ವಹಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸುವುದರೊಂದಿಗೆ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಒದಗಿಸಬೇಕೆಂದು ತಿಳಿಸಿದರು. ಸಕಾಲದಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ನಿಗದಿಪಡಿಸಿದ ವೇಳೆಯಲ್ಲಿ ವಿಲೇವಾರಿ ಮಾಡದಿದ್ದಲ್ಲಿ ಇಲಾಖೆಯ ಅಧಿಕಾರಿಗಳೇ ಹೊಣೆಗಾರರಾತ್ತಾರೆ ಹಾಗೂ ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ. ಕಾರಣ ಅದಕ್ಕೆ ಅವಕಾಶ ನೀಡದೇ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯನಿರ್ವಹಿಸುವಂತೆ ಸೂಚಿಸಿದರು.
ಎಪ್ರಿಲ್ 2021 ರ ಮಾಹೆಯಲ್ಲಿ ಸಕಾಲ ಯೋಜನೆಯಡಿ 24908 ಅರ್ಜಿಗಳು ಸ್ವೀಕೃತವಾಗಿದ್ದು 2348 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಸಕಾಲ ಕಾರ್ಯಕ್ರಮದ ನೋಡಲ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.