ಅರ್ಜಿಗಳು ಸಕಾಲದಲ್ಲಿ ವಿಲೇವಾರಿ ಅಟಲ್‌ಜೀ ಜನಸ್ನೇಹಿ ಕೇಂದ್ರದ ಉತ್ತಮ ಸಾಧನೆ: ತಾಲ್ಲೂಕು ಆಡಳಿತಕ್ಕೆ ಡಿಸಿ ಪ್ರಶಂಸೆ

ಸಿರಾ, ಜು, ೨೦- ತಾಲ್ಲೂಕಿನ ಐದು ಹೋಬಳಿಗಳ ಅಟಲ್ ಜೀ ಜನಸ್ನೇಹಿ ಕೇಂದ್ರದ ಕಾರ್ಯ ಸಾಧನೆಯಲ್ಲಿ ಜಿಲ್ಲೆಯಲ್ಲೇ ಸಿರಾ ತಾಲ್ಲೂಕು ಮೊದಲ ಸ್ಥಾನ ಪಡೆದಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ಹಲವು ಸೌಲಭ್ಯಗಳ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ತಾಲ್ಲೂಕಿನ ಎಲ್ಲಾ ಐದು ಹೋಬಳಿಗಳಿಗೂ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಪ್ರಶಂಸನಾ ಪತ್ರ ನೀಡಿದ್ದಾದರೆ.
ಸರ್ಕಾರ ನಾಗರಿಕರಿಗೆ ವಿವಿಧ ಸೇವೆಗಳನ್ನು ಅಟಲ್ ಜೀ ಜನಸ್ನೇಹಿ ಕೇಂದ್ರಗಳ (ನಾಡಕಚೇರಿ) ಮೂಲಕ ಸುಲಭವಾಗಿ ತಲುಪಿಸುವ ಗುರಿಯನ್ನು ಹೊಂದಿದೆ. ಅಲ್ಲದೇ ಜಾತಿ ಮತ್ತು ಆದಾಯ, ಭೂಮಿ ಮತ್ತು ಕೃಷಿಕರಿಗೆ ಸಂಬಂಧಿಸಿದ ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಳು, ಜಾತಿ-ಆದಾಯ ಪ್ರಮಾಣ ಪತ್ರ, ಪಡಿತರ ತಿದ್ದುಪಡಿ, ಪಹಣಿ, ಮ್ಯೂಟೇಷನ್, ಆಧಾರ್ ಅರ್ಜಿ, ತಿದ್ದುಪಡಿ ಸೇರಿದಂತೆ ೨೫ಕ್ಕೂ ಹೆಚ್ಚಿನ ಸೇವೆಗಳನ್ನು ಒದಗಿಸುತ್ತಿದೆ.
ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ತಾಲ್ಲೂಕಿನ ಕಸಬಾ, ಕಳ್ಳಂಬೆಳ್ಳ, ಗೌಡಗೆರೆ, ಬುಕ್ಕಾಪಟ್ಟಣ ಮತ್ತು ಹುಲಿಕುಂಟೆ ಹೋಬಳಿಯ ಎಲ್ಲಾ ನಾಡಕಚೇರಿಗಳ ಅಟಲ್‌ಜೀ ಸೇವಾ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಪ್ರಶಂಸನಾ ಪತ್ರ ನೀಡಿದ್ದಾರೆ. ಈ ಎಲ್ಲಾ ಕೇಂದ್ರಗಳಲ್ಲೂ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ಸೇವೆಯನ್ನು ನೀಡುವ ಮೂಲಕ ಉತ್ತಮ ಸಾಧನೆ ಮಾಡಿವೆ.
ಅಟಲ್‌ಜೀ ಜನಸ್ನೇಹಿ ಕೇಂದ್ರದ ಯೋಜನೆಯಡಿಯಲ್ಲಿ ಜೂನ್-೨೦೨೨ರ ಮಾಹೆಯಲ್ಲಿ ಹೆಚ್ಚಿನ ಡಿಸ್ಪೋಸಲ್ ಇಂಡೆಕ್ಸ್ ಸಾಧಿಸಿ ನಾಗರಿಕರಿಗೆ ಸಕಾಲಿಕ ಸೇವೆ ನೀಡಿ ಅರ್ಜಿಗಳನ್ನು ನಿಗದಿತ ಅವಧಿಯವರೆಗೆ ಕಾಯದೇ ಮುಂಚಿತವಾಗಿ ವಿಲೇ ಮಾಡಿದ್ದು, ಕಳ್ಳಂಬೆಳ್ಳ ಹೋಬಳಿಯಲ್ಲ ೧೪.೭ ರಷ್ಟಿ ಡಿಸ್ಪೋಸಲ್ ಇಂಡೆಕ್ಸ್, ಬುಕ್ಕಾಪಟ್ಟಣ ಹೋಬಳಿಯಲ್ಲಿ ೧೪.೪ ರಷ್ಟು ಡಿಸ್ಪೋಸಲ್ ಇಂಡೆಕ್ಸ್, ಹುಲಿಕುಂಟೆ ಹೋಬಳಿಯಲ್ಲಿ ೧೨.೪ ರಷ್ಟು ಡಿಸ್ಪೋಸಲ್ ಇಂಡೆಕ್ಸ್, ಗೌಡಗೆರೆ ಹೋಬಳಿಯಲ್ಲಿ ೧೨.೪ ರಷ್ಟು ಡಿಸ್ಪೋಸಲ್ ಇಂಡೆಕ್ಸ್, ಕಸಬಾ ಹೋಬಳಿಯಲ್ಲಿ ೧೦.೬ ರಷ್ಟು ಡಿಸ್ಪೋಸಲ್ ಇಂಡೆಕ್ಸ್ ಸಾಧಿಸಿದ್ದೀರಿ ನಿಮ್ಮ ಸೇವೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ತಮ್ಮ ಕಚೇರಿಯ ಎಲ್ಲಾ ಸಿಬ್ಬಂದಿಗಳು ತಮ್ಮ ಸೇವಾವಧಿಯಲ್ಲಿ ಹೆಚ್ಚಿಯ ಯಶಸ್ಸು ಸಿಗಲಿ ನಿಮಗೆ ಅಭಿನಂದನೆಗಳು ಎಂದು ಜಿಲ್ಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದು, ಎಲ್ಲಾ ನಾಡಕಚೇರಿಯ ಉಪತಹಶೀಲ್ದಾರ್‌ಗಳ ಸೇವೆಯನ್ನು ಪ್ರಶಂಸಿಸಿದ್ದಾರೆ.
ಉತ್ತಮ ಕಾರ್ಯ ಮಾಡಿಸುವಲ್ಲಿ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಮಮತ.ಎಂ. ಅವರ ಕಾರ್ಯವೈಖರಿಗೆ ಜನ ಮೆಚ್ಚುಗೆ ವ್ಯಕ್ತವಾಗಿದೆ.