ಅರ್ಚಕವೃಂದ ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ

ಚಾಮರಾಜನಗರ, ಮಾ.29- ಜಿಲ್ಲೆಯ ಪ್ರಸಿದ್ಧ ಯಾತ್ರಾಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ನಾಗಮಲೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಇಂದು ಭೇಟಿ ನೀಡಿ ಅಗತ್ಯ ಸೌಲಭ್ಯಗಳನ್ನು ಪರಿಶೀಲಿಸಿದರು.
ದುರ್ಗಮ ಪ್ರದೇಶವಾಗಿರುವ ನಾಗಮಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಅಲ್ಲಿನ ದೇವಸ್ಥಾನಕ್ಕೆ ತೆರಳಿ ಅರ್ಚಕವೃಂದ ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಅಹವಾಲುಗಳನ್ನು ಆಲಿಸಿದರು.
ಇದೇ ವೇಳೆ ಗ್ರಾಮಸ್ಥರು ಸ್ಥಳೀಯವಾಗಿ ರಸ್ತೆ ಮಾಡಿಕೊಡಬೇಕಿದೆ. ಈಗಿರುವ ರಸ್ತೆ ತೀರಾ ಹದಗೆಟ್ಟಿದ್ದು, ಜನರ ಓಡಾಟಕ್ಕೆ ಅನಾನುಕೂಲವಾಗಿದೆ. ಅಲ್ಲದೆ ವೈದ್ಯಕೀಯ ಚಿಕಿತ್ಸೆ ಪಡೆಯಲು ತುರ್ತು ಅಗತ್ಯವಿದ್ದಾಗ ಪ್ರಸ್ತುತ ರಸ್ತೆಯಲ್ಲಿ ತೆರಳಲು ಕಷ್ಟಸಾಧ್ಯವಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಗರ್ಭಿಣಿಯರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುವ ತುರ್ತು ಸಂದರ್ಭದಲ್ಲಿ ರಸ್ತೆ ಇಲ್ಲದೇ ತೊಂದರೆಯಾಗಿರುವುದನ್ನು ಗಮನಿಸಲಾಗಿದೆ. ಹೀಗಾಗಿ ಹೆರಿಗೆ ಸಮಯದ ಒಂದು ತಿಂಗಳ ಮುಂಚಿತವಾಗಿಯೇ ಮಹದೇಶ್ವರ ಬೆಟ್ಟದಲ್ಲಿರುವ ಆಸ್ಪತ್ರೆಗೆ ದಾಖಲಾಗಲು ಅನುಕೂಲವಾಗುವಂತೆ ಹಾಗೂ ಬೆಟ್ಟದಲ್ಲಿಯೇ ಉಳಿಯಲು ಅಗತ್ಯ ವ್ಯವಸ್ಥೆ ಕಲ್ಪಿಸಲು ಪರಿಶೀಲಿಸಲಾಗುವುದು ಎಂದರು.
ಆರೋಗ್ಯ ಸೌಲಭ್ಯಗಳಿಗಾಗಿ ಸ್ಥಳೀಯ ಗ್ರಾಮಗಳಿಗೆ ಸಂಚಾರಿ ವೈದ್ಯಕೀಯ ವಾಹನದ ವ್ಯವಸ್ಥೆ ಮಾಡಲಾಗುತ್ತದೆ. ಮಲೆ ಮಹದೇಶ್ವರ ಬೆಟ್ಟದ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಆದೇಶ ಆಗಲಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ನಂತರ ಸ್ಥಳೀಯ ರಸ್ತೆಯನ್ನು ಸಾಧ್ಯವಾದಷ್ಟು ಸುಧಾರಿಸುವ ಜೊತೆಗೆ ಸ್ಥಳೀಯ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.
ಬಳಿಕ ನಾಗಮಲೆಯಲ್ಲಿರುವ ಪ್ರಾಥಮಿಕ ಶಾಲೆಗೆ ತೆರಳಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈಗಿರುವ ಕಟ್ಟಡದ ಬಲವರ್ಧನೆಗಾಗಿ ದುರಸ್ಥಿ ಕೆಲಸವನ್ನು ಕೈಗೊಳ್ಳಲು ಇಂಜಿನಿಯರ್ ಅವರು ಸಂಪೂರ್ಣವಾಗಿ ಪರಿಶೀಲಿಸಲಿದ್ದಾರೆ. ಶಾಲೆಯ ದುರಸ್ಥಿಗೆ ಅಗತ್ಯ ನೆರವು ನೀಡಿ ಸೌಲಭ್ಯ ಕಲ್ಪಿಸಲಾಗುವುದೆಂದರು.
ಪ್ರಸ್ತುತ ಶಾಲೆಗೆ ನಿಯೋಜಿತರಾಗಿರುವ ಶಿಕ್ಷಕರು ಸರಿಯಾಗಿ ಹಾಜರಾಗುತ್ತಿದ್ದಾರೆಂದು ವರದಿ ಬಂದಿರುವುದರಿಂದ ಶಿಕ್ಷಕರ ಕೊರತೆ ಇಲ್ಲವೆಂಬ ಮಾಹಿತಿ ತಿಳಿದುಬಂದಿದೆ. ಶಾಲೆಗೆ ಬೇಕಿರುವ ಯಾವುದೇ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದೆಂದು ಜಿಲ್ಲಾಧಿಕಾರಿ ಹೇಳಿದರು.
ಇದೇ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು, ವ್ಯಾಪಾರಸ್ಥರ ಬಳಿಗೆ ತೆರಳಿದ ಜಿಲ್ಲಾಧಿಕಾರಿಯವರು ಅವರ ಕುಂದುಕೊರತೆಗಳನ್ನು ವಿಚಾರಿಸಿದರು. ಪ್ರತಿದಿನ ಅಂಗಡಿ ಮುಂಗಟ್ಟುಗಳಿಗೆ ಎಷ್ಟು ಜನ ಭಕ್ತಾಧಿಗಳು ಭೇಟಿ ನೀಡುತ್ತಿದ್ದಾರೆ? ವ್ಯಾಪಾರ-ವಹಿವಾಟು ಹೇಗೆ ನಡೆಯುತ್ತಿದೆ? ಎಂಬ ಬಗ್ಗೆ ಜಿಲ್ಲಾಧಿಕಾರಿಯವರು ಖುದ್ದು ತಿಳಿದುಕೊಂಡರು.
ಶಾಲಾ ಅವರಣದಲ್ಲಿ ಸ್ಥಳೀಯರು ಹಾಗೂ ವ್ಯಾಪಾರಿಗಳು ಹಾಗೂ ಅಂಗಡಿ ಮುಂಗಟ್ಟುಗಳ ಮಾಲೀಕರೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿಯವರು ಇಲ್ಲಿನ ಪರಂಪರೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಪರಿಸರವನ್ನು ಉತ್ತಮವಾಗಿ ಕಾಪಾಡಿಕೊಳ್ಳ್ಳಬೇಕು. ಪ್ಲಾಸ್ಟಿಕ್ ಬಳಸಬಾರದು, ಹೊರಗಿನವರು ಯಾರೇ ಬರಲಿ ತ್ಯಾಜ್ಯವನ್ನು ಇಲ್ಲಿ ಸುರಿಯಬಾರದು. ತಾವೇ ತೆಗೆದುಕೊಂಡು ಹೋಗಿ ಹೊರಗಿನ ಭಾಗದ ನಿಗದಿತ ಜಾಗದಲ್ಲಿ ಕಸವನ್ನು ಹಾಕಬೇಕು. ಈ ಬಗ್ಗೆ ಭಕ್ತಾಧಿಗಳಿಗೆ ಸೂಚಿಸುವ ಪ್ರಕ್ರಿಯೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಸುರೇಂದ್ರ, ಕಾವೇರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿ ರಮೇಶ್, ಇತರರು ಈ ಸಮಯದಲ್ಲಿ ಹಾಜರಿದ್ದರು.