ಅರೋಗ್ಯ ನಾಗರೀಕರ ನಿರ್ಮಾಣಕ್ಕೆ ದೈಹಿಕ ಶಿಕ್ಷಕರ ಕರ್ತವ್ಯ


ಸಂಜೆವಾಣಿ ವಾರ್ತೆ
 ಸಿರುಗುಪ್ಪ, ಜು.6: “ಶಿಕ್ಷಣ ಕ್ರಿಯೆಯ ಒಂದು ಭಾಗ ಯೋಗ್ಯವಾದ ಶಾರೀರಿಕ ಚಟುವಟಿಯಾಗಿದೆ, ಶಾರೀರಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ  ಮತ್ತು ಸಾಮಾಜಿಕವಾಗಿ ಯೋಗ್ಯರಾದ ನಾಗರೀಕನನ್ನು ನಿರ್ಮಾಣ ಮಾಡುವುದೆ ದೈಹಿಕ ಶಿಕ್ಷಣ ಶಿಕ್ಷಕರ ಜವಾಬ್ದಾರಿಯಾಗಿದೆ” ಎಂದು  ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗುರ್ರದಪ್ಪ ತಿಳಿಸಿದರು.
  ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ “ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ”ದಲ್ಲಿ ಮಾತನಾಡಿದರು.
 ವಿದ್ಯಾರ್ಥಿಗಳಿಗೆ ಕ್ರೀಡೆಗಳ ಕನಿಷ್ಠ ಜ್ಞಾನವನ್ನು ದೈಹಿಕ ಶಿಕ್ಷಕರು ಮೂಡಿಸಿ, ಕ್ರೀಡೆಗಳು ಹಾಗೂ ಕ್ರೀಡಾ ನೀತಿಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವಂತೆ ಸೂಚಿಸಿದರು.
 ಹೋಬಳಿ ಮಟ್ಟದ ಕ್ರೀಡಾಕೂಟಗಳನ್ನು ನಿಗಧಿತ ಅವಧಿಯೊಳಗೆ ಮುಗಿಸಿ, ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಗಳಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ದೈಹಿಕ ಶಿಕ್ಷಕ ಚನ್ನಪ್ಪ ಒತ್ತಾಯಿಸಿದರು.
 ದೈಹಿಕ ಶಿಕ್ಷಣ ಪರಿವೀಕ್ಷಕ ರಹೆಮತ್ತುಲ್ಲಾ ಮಾತನಾಡಿದರು. ಕ್ಷೇತ್ರ ಸಮನ್ವಯ ಅಧಿಕಾರಿ ತಮ್ಮನಗೌಡ ಪಾಟೀಲ್, ದೈಹಿಕ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್, ಜಿಲ್ಲಾ ಗೌರವಾಧ್ಯಕ್ಷ ಬಿ.ಚನ್ನಪ್ಪ, ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನ, ವೈ.ಡಿ.ವೆಂಕಟೇಶ, ಪರಶುರಾಮ, ಉಪೇಂದ್ರ, ಅಜ್ಮೀರ ಇದ್ದರು.