ಅರೇ ಸೇನಾಪಡೆಗೆ ಮಹಿಳೆಯರ ಅದ್ಧೂರಿ ಸ್ವಾಗತಸಂಜೆವಾಣಿ ಪ್ರತಿನಿಧಿಯಿಂದ

ಹರಪನಹಳ್ಳಿ.ಮಾ.೧೮; ಲೋಕಸಭಾ ಚುನಾವಣೆಗೆ ನಿರ್ಭೀತಿಯಿಂದ ಮತ ಚಲಾಯಿಸಲು ಮತದಾರರಿಗೆ ಅರಿವು ಮೂಡಿಸುವ ಸಲುವಾಗಿ ಪಥ ಸಂಚಲನಕ್ಕೆ ಪಟ್ಟಣಕ್ಕೆ ಆಗಮಿಸಿದ ಅರೆ ಸೇನಾಪಡೆಗೆ ಇಲ್ಲಿಯ ಮಹಿಳೆಯರು ಆರತಿ ಬೆಳಗಿ, ಬರಮಾಡಿಕೊಂಡರು.ಪಟ್ಟಣದ ಅರಸಿಕೇರಿ ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ಅರೆ ಸೇನಾಪಡೆ ಬಂದಿಳಿಯಿತು.ಆಗ ವಾಲ್ಮೀಕಿ ನಗರದ ಇಬ್ಬರು ಮಹಿಳೆಯರು ಆರತಿ ಬೆಳಗಿ ದೃಷ್ಟಿ ತೆಗೆದು ಚುನಾವಣೆ ಸುಸೂತ್ರವಾಗಿ ನಡೆಯಲಿ ಎಂದು ಪ್ರಾರ್ಥಿಸಿದರು.
ಯುವಕರು ಅರೆ ಸೇನಾ ಪಡೆ ಹಿರಿಯ ಅಧಿಕಾರಿಗಳಿಗೆ ಶಾಲು, ಹೂವಿನ ಹಾರ ಹಾಕಿ ಸನ್ಮಾನಿಸಿದರು. ನಂತರ ಡಿವೈಎಸ್ಪಿ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಸಿಪಿಐ ಸಾಬಯ್ಯನವರು ಹಾಗೂ ಪಿಎಸ್‌ಐ ಗಳಾದ ಶಂಭುಲಿಂಗಹಿರೇಮಠ, ಕಿರಣಕುಮಾರ, ಲಿಂಗಯ್ಯ, ನವರು ಪಥ ಸಂಚಲನ ನಡೆಸಿದರು.ಅರಸಿಕೇರಿ ರಸ್ತೆಯಿಂದ ವಾಲ್ಮೀಕಿ ನಗರ, ಹರಿಹರ ವೃತ್ತ, ಹೊಸಪೇಟೆ ರಸ್ತೆ, ಪ್ರವಾಸಿ ಮಂದಿರ ವೃತ್ತ ಮೂಲಕ ಪೋಲಿಸ್ ಠಾಣೆಗೆ ತೆರಳಿದರು. ಈ ಮೂಲಕ ಜನರಲ್ಲಿ ಮತದಾನದ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರತಿಯೊಬ್ಬರ ಹಕ್ಕು, ಅಂಜದೆ,ಅಳುಕದೆ, ಶಾಂತ ರೀತಿಯಿಂದ ಪ್ರಜಾಪ್ರಭುತ್ವದ ಹಬ್ಬವನ್ನು ಮಾಡಬೇಕು , ಅದಕ್ಕಾಗಿ ಜನರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದರು.
ಅರಸಿಕೆರೆಯಲ್ಲಿ ಪಥಸಂಚಲನ: ತಾಲೂಕಿನ ಅರಸಿಕೆರೆ ಗ್ರಾಮದಲ್ಲಿ ಸಹ ಲೋಕಸಭಾ ಚುನಾವಣೆ ನಿಮಿತ್ತ ಪೋಲಿಸ್ ಸಿಬ್ಬಂದಿಯನ್ನು ಸಕಲ ವಾದ್ಯಗಳೊಂದಿಗೆ ಅರತಿ ಬೆಳಗಿ ಹೂವುಗಳನ್ನು ನೀಡುವ ಮೂಲಕ ಸ್ವಾಗತಿಸಲಾಯಿತು. ಬಳಿಕ ಅರೆಸೇನೆ ಮತ್ತು ಪೋಲಿಸ್ ಸಿಬ್ಬಂದಿ ಬಸ್ ನಿಲ್ದಾಣದಿಂದ ಆರಂಭಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು. ಕಂಚಿಕೇರೆ ಗ್ರಾಮದಲ್ಲಿ ಸಹ ಪಥ ಸಂಚಲನ ಮೂಲಕ ಚುನಾವಣೆಯಲ್ಲಿ ಶಾಂತಿ ಕಾಪಾಡುವ ಸಂದೇಶ ಸಾರಲಾಯಿತು. ಈ ವೇಳೆ ಡಿವೈಎಸ್‌ಪಿ ವೆಂಕಟಪ್ಪ ನಾಯಕ, ಸಿಪಿಐ ಸಾಬಯ್ಯ, ಪಿಎಸ್‌ಐ ಅರಸಿಕೆರೆ ರಂಗಯ್ಯ, ಚಿಗಟೇರಿ ಕಿರಣಕುಮಾರ, ಭೀಮದಾಸ, ಹಲುವಾಗು ವಿರೇಶ್, ಹಾಗೂ ಪೋಲಿಸ್ ಸಿಬ್ಬಂದಿ ಇದ್ದರು.