ಅರುಣಾಚಲ ಮಕ್ಕಳಿಗೆ ತ್ರಿವರ್ಣ ಮಾಸ್ಕ್

ಇಟಾನಗರ್,ನ.೧೦- ಶಾಲಾ ಮಕ್ಕಳಲ್ಲಿ ದೇಶ ಪ್ರೇಮ ಹೆಚ್ಚಿಸಲು ತ್ರಿವರ್ಣ ಧ್ವಜ ಬಣ್ಣದ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ. ಈ ತಿಂಗಳ ೧೬ ರಿಂದ ಶಾಲೆಗಳು ಆರಂಭವಾಗುತ್ತಿದ್ದು, ಸಾವಿರಾರು ಮಾಸ್ಕ್‌ಗಳ ವಿತರಣೆ ಮಾಡಲಾಗುತ್ತಿದೆ.
ಈ ಸಂಬಂಧ ಅರುಣಾಚಲ ಪ್ರದೇಶ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬಿದ್ದಿದೆ. ನ. ೧೬ ರಿಂದ ೧೦ನೇ ತರಗತಿ ಹಾಗೂ ೧೨ನೇ ತರಗತಿ ಶಾಲಾ-ಕಾಲೇಜುಗಳನ್ನು ತೆರೆಯಲು ರಾಜ್ಯಸರ್ಕಾರ ತೀರ್ಮಾನಿಸಿದೆ.
ಇದರ ಭಾಗವಾಗಿ ಖಾದಿ ಮತ್ತು ಗ್ರಾಮೋದ್ಯೋಗದಿಂದ ೬೦ ಸಾವಿರ ಖಾದಿ ಬಟ್ಟೆಯ ಮಾಸ್ಕ್ ಖರೀದಿಗೆ ಅನುಮತಿ ನೀಡಲಾಗಿದೆ.
ಕೊರೊನಾ ಲಾಕ್‌ಡೌನ್ ಬಳಿಕ ಶಾಲೆಗೆ ಮರಳಿದ ಬಳಿಕ ಸಾವಿರಾರು ಮಕ್ಕಳು ತ್ರಿವರ್ಣದ ಮಾಸ್ಕ್ ಧರಿಸಲಿದ್ದಾರೆ ಎಂದು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಹೇಳಿದೆ. ಈಗಾಗಲೇ ಸರ್ಕಾರಕ್ಕೆ ಮಾಸ್ಕ್ ಪೂರೈಸಿದ್ದು ಇನ್ನು ೬ ದಿನಗಳಲ್ಲಿ ಉಳಿದ ಮಾಸ್ಕ್‌ಗಳನ್ನು ಮಕ್ಕಳಿಗೆ ನೀಡಬೇಕಾಗಿದೆ.
ಮಕ್ಕಳಲ್ಲಿ ದೇಶ ಪ್ರೇಮದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತ್ರಿವರ್ಣವಿರುವ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ, ಈ ಎಲ್ಲ ಮಾಸ್ಕ್‌ಗಳನ್ನು ಖಾದಿ ಮತ್ತು ಗ್ರಾಮೋದ್ಯೋಗ ಉತ್ಪಾದಿಸಲಿದ್ದು, ಡಬಲ್ ಟ್ವಿಸ್ಟೆಡ್ ಖಾದಿ ಬಟ್ಟೆಯಿಂದ ಮಾಸ್ಕ್ ತಯಾರಿಸಲಾಗಿದೆ.
ಈ ರೀತಿ ಮಾಸ್ಕ್ ತಯಾರಿಸುವುದರಿಂದ ಉಸಿರಾಟದ ಸಮಸ್ಯೆ ಮಕ್ಕಳನ್ನು ಕಾಡುವುದಿಲ್ಲ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.