
ಬೀಜಿಂಗ್,ಏ.೪- ಭಾರತದ ಭೂಭಾಗವನ್ನು ಕಬಳಿಸುವ ಯತ್ನ ನಡೆಸಿರುವ ನಡುವೆಯೇ ಚೀನಾ, ಇದೀಗ ಅರುಣಾಚಲ ಪ್ರದೇಶದ ೧೧ ಸ್ಥಳಗಳ ಮರು ನಾಮಕರಣದ ಹೆಸರು ಪ್ರಕಟಿಸುವ ಮೂಲಕ ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಮುಂದಾಗಿದೆ.
ಕಳೆದ ೫ ವರ್ಷಗಳಲ್ಲಿ ಮೂರನೇ ಬಾರಿ ಅರುಣಾಚಲ ಪ್ರದೇಶದಲ್ಲಿನ ಭೂಭಾಗಗಳ ಹೆಸರನ್ನು ಮರು ನಾಮಕರಣ ಮಾಡಿ ಪ್ರಕಟಿಸಿದೆ.
೧೧ ಸ್ಥಳಗಳ ಅಧಿಕೃತ ಹೆಸರುಗಳಲ್ಲಿ ಎರಡು ಭೂ ಪ್ರದೇಶಗಳು, ಎರಡು ವಸತಿ ಪ್ರದೇಶಗಳು, ಐದು ಪರ್ವತ ಶಿಖರಗಳು ಮತ್ತು ಎರಡು ನದಿಗಳು ಸೇರಿವೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಅರುಣಾಚಲ ಪ್ರದೇಶದ ಮೇಲೆ ಚೀನಾ ಹಕ್ಕು ಸಾಧಿಸಲು ಮುಂದಾಗಿದ್ದು ಅದರ ಮುಂದುವರಿದ ಭಾಗವಾಗಿ ಹೆಸರು ಮರುನಾಮಕರಣ ಮಾಡಿದೆ. ಅರುಣಾಚಲ ಪ್ರದೇಶಕ್ಕಾಗಿ ಚೈನಾ, ಟಿಬೆಟಿಯನ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ ಮೂರನೇ ಬಾರಿ ಹೆಸರುಗಳನ್ನು ಬಿಡುಗಡೆ ಮಾಡಿದೆ.
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದ ಅರುಣಾಚಲ ಪ್ರದೇಶಕ್ಕೆ ೧೧ ಸ್ಥಳಗಳ ಪ್ರಮಾಣಿತ ಹೆಸರುಗಳನ್ನು ಬಿಡುಗಡೆ ಮಾಡಿದೆ, ಇದನ್ನು “ಜಂಗ್ನಾನ್, ಟಿಬೆಟ್‌ನ ದಕ್ಷಿಣ ಭಾಗ” ಎಂದು ಕರೆದಿದೆ.
ಇದೇ ಮೊದಲಲ್ಲ:
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಅರುಣಾಚಲ ಪ್ರದೇಶಕ್ಕೆ ಪ್ರಮಾಣೀಕೃತ ಭೌಗೋಳಿಕ ಹೆಸರುಗಳನ್ನು ಮೂರನೇ ಬಾರಿ ಬಿಡುಗಡೆ ಮಾಡಿದೆ.
೨೦೧೭ರಲ್ಲಿ ಅರುಣಾಚಲದಲ್ಲಿ ಆರು ಸ್ಥಳಗಳ ಪ್ರಮಾಣೀಕೃತ ಹೆಸರುಗಳನ್ನು ಮೊದಲ ಬಾರಿ ಬಿಡುಗಡೆ ಮಾಡಿತ್ತು. ಅದಾದ ನಂತರ ೨೦೨೧ರಲ್ಲಿ ಎರಡನೇ ಹಂತದಲ್ಲಿ ೧೫ ಸ್ಥಳಗಳ ಹೆಸರನ್ನು ಮರುನಾಮಕರಣ ಮಾಡಲಾಗಿತ್ತು.
ಭಾರತದ ಅವಿಭಾಜ್ಯ ಅಂಗ
ಅರುಣಾಚಲ ಪ್ರದೇಶದ ಕೆಲವು ಸ್ಥಳಗಳನ್ನು ಮರುನಾಮಕರಣ ಮಾಡುವ ಚೀನಾದ ಕ್ರಮವನ್ನು ಭಾರತ ಹಿಂದೆ ತಳ್ಳಿಹಾಕಿದೆ, ಅರುಣಾಚಲ ಪ್ರದೇಶ “ಯಾವಾಗಲೂ” ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಭಾರತ ಸರ್ಕಾರ ಹೇಳಿದೆ.
ಚೀನಾ ಹೆಸರು ಬದಲಾವಣೆ ಮಾಡಿದ ತಕ್ಷಣ ಅರುಣಾಚಲ ಪ್ರದೇಶ ಚೀನಾದ ಭೂಭಾಗವಾಗುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.