ಅರಿವು ಮೂಡಿಸುವವರೇ ನಿಜ ಗುರುಗಳು  

ದಾವಣಗೆರೆ. ಸೆ.೭; ನಮ್ಮ ಲೋಪ ದೋಷಗಳನ್ನು ಪ್ರೀತಿಯಿಂದ ತಿದ್ದಿ ತೀಡಿ ಅರಿವು ಮೂಡಿಸುವ ವ್ಯಕ್ತಿಗಳೇ ನಮ್ಮ ನಿಜವಾದ ಗುರುಗಳು. ಅರಿವಿನ ಹಾದಿಯಲ್ಲಿ ಸಾಗಿದಾಗ ಬದುಕು ಉಜ್ವಲವಾಗುತ್ತದೆ ಎಂದು ಶಿಕ್ಷಣ ಪ್ರೇಮಿ, ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಶಿವಾನಂದಪ್ಪ ಹೇಳಿದರು.ಹರಿಹರ ತಾಲ್ಲೂಕಿನ , ಮಲೇಬೆನ್ನೂರು ಪಟ್ಟಣದ ಜಿಗಳಿ ರಸ್ತೆಯಲ್ಲಿರುವ ಒಡೆಯರ ಬಸವಾಪುರ ಗ್ರಾಪಂ ವ್ಯಾಪ್ತಿಯ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ ನ ರಾಜ ರಾಜೇಶ್ವರಿ ವಿದ್ಯಾ ಸಂಸ್ಥೆಯಲ್ಲಿ  ವಿದ್ಯಾರ್ಥಿಗಳೇ ವೈವಿಧ್ಯಮಯವಾಗಿ ಆಚರಿಸಲಾದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಎಲ್ಲರಲ್ಲಿಯೂ ಸಾಧಿಸುವ ಸಾಮರ್ಥ್ಯ ಸುಪ್ತವಾಗಿ ಅಡಗಿರುತ್ತದೆ. ಅದರ ಅನುಭವ ಮಾಡಿಸಿ, ಸಾಧನೆಗೆ ಪ್ರೇರೇಪಿಸುವ ಕಾರ್ಯ ಎಲ್ಲರಿಂದ ಸಾಧ್ಯವಿಲ್ಲ.  ಯಾರು ಆ ಕಾರ್ಯ ಮಾಡುವರೋ ಅವರು ಗುರುವಿನ ಸ್ಥಾನ ಅಲಂಕರಿಸುತ್ತಾರೆ. ಗುರುವಿನ ಶಕ್ತಿ ಮತ್ತು ಗುರು ಮಹಿಮೆ ಅಗಾಧ, ಅಪಾರ ಎಂದು ಬಣ್ಣಿಸಿದರು.ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಒಂದು ತಂಡ ತಮ್ಮ ನೆಚ್ಚಿನ ಶಿಕ್ಷಕರ ವಿಷಯವನ್ನು, ಅವರಂತೆಯೇ ವೇಷಭೂಷಣ ಧರಿಸಿ, ಅವರ ಶೈಲಿಯಲ್ಲಿಯೇ ಸಂಪೂರ್ಣ ಬೆಳಗಿನ ಅವಧಿಯಲ್ಲಿ ಎಲ್.ಕೆ.ಜಿ ಯಿಂದ 9 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಬೋಧಿಸಿ ತಮ್ಮ ಅಭಿಮಾನ ತೋರುವ ಜೊತೆ ನಾಯಕತ್ವ ಮೆರೆಯಿತು.  ಮತ್ತೊಂದು ತಂಡ ಎಲ್ಲಾ ಶಿಕ್ಷಕರಿಗೂ ಸಿಹಿ ಹಂಚಿ, ಥ್ರೋಬಾಲ್, ಮ್ಯೂಸಿಕ್ ಚೇರ್, ಕಲರ್ಸ್ ಪಿಕ್ಕಿಂಗ್, ಇತ್ಯಾದಿ ಆಟ ಆಡಿಸಿ ನಕ್ಕು ನಲಿದು ಶಿಕ್ಷಕರನ್ನೂ ನಗಿಸಿತು. ನಂತರ ಎಲ್ಲರೂ ಕೂಡಿ ಒಂದೆಡೆ ವೇದಿಕೆ ಕಾರ್ಯಕ್ರಮ ಏರ್ಪಡಿಸಿ ಆಟೋಟಗಳಲ್ಲಿ ಗೆದ್ದಿದ್ದ  ಶಿಕ್ಷಕರಿಗೆ ಬಹುಮಾನ ವಿತರಿಸಿ ಸಂಭ್ರಮಿಸಿದರು. ಆ ಮೂಲಕ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸಿದರು .  ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಸಂಸ್ಥೆಯ ಕಾರ್ಯದರ್ಶಿ ಜಿ ಬಿ ಶಿವಾನಂದಪ್ಪ,  ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಶಿವಾನಂದಪ್ಪ, ಮುಖ್ಯೋಪಾಧ್ಯಾಯ ಶಶಿಧರ್ ಎಸ್, ಶಿಕ್ಷಕರಾದ ರವೀಂದ್ರ, ಆಸೀಫುಲ್ಲಾ, ಶಿಕ್ಷಕಿಯರಾದ ಕವಿತಾ ಕೊಮಾರನಹಳ್ಳಿ, ಪ್ರತಿಭಾ, ನಗೀನಾ, ಶಾಂತಾ, ಭಾಗ್ಯ, ಅನುಷಾ, ಚಂದನ, ಲಕ್ಷ್ಮೀ, ಜಯಲಕ್ಷ್ಮೀ, ಸಂಗೀತ, ಪೂಜೆ ಸಲ್ಲಿಸಿದರು.ನಂತರ 10 ನೇ ತರಗತಿಯ ವರ್ಷಾ ಚೌಧರಿ ಶಿಕ್ಷಕರ ದಿನಾಚರಣೆಯ ಮಹತ್ವ ತಿಳಿಸಿ ಕೊಟ್ಟರು. 8 ನೇ ತರಗತಿಯ ನಿದಾ   ಸಮ್ರೀನ್ ಸಹೋದರಿಯರು ರೂಪಕ ಮೂಲಕ ಸಂಸ್ಥೆಯ  ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಶಿವಾನಂದಪ್ಪ ಅವರ ಅನುಕರಣೆ ಮಾಡಿ ತೋರಿಸಿದರು. ವಿದ್ಯಾರ್ಥಿಗಳಾದ ಅನುಷಾ, ಗೌರಿಕಾ, ಹೃತಿಕಾ, ಕನೀಜಾ ಫಾತೀಮಾ, ಪ್ರಿಯದರ್ಶಿನಿ, ರಮ್ಯಾ, ಕಾವೇರಿ, ತೇಜಸ್ವಿನಿ, ವೀಣಾ, ವರ್ಷಾ, ಸಾನಿಯಾ, ಬಸವನಗೌಡ, ಅಭಿರಾಮ್, ಮನೋಜ್  ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು.