ಅರಿವಿನ ಗುರುವಾಗಿದ್ದರು ಸಿದ್ದೇಶ್ವರ ಶ್ರೀಗಳು:ಬಿ.ವಾಮದೇವಪ್ಪ

ದಾವಣಗೆರೆ. ಜ.೪: ಸಿದ್ದೇಶ್ವರ ಶ್ರೀಗಳು ಹಲವಾರು ದಶಕಗಳಿಂದ ನಾಡಿನಾದ್ಯಂತ ನಿರಂತರವಾಗಿ ಜ್ಞಾನ ದಾಸೋಹವನ್ನು ಮಾಡುವ ಮೂಲಕ ಅರಿವಿನ ಗುರುವಾಗಿದ್ದರು. ಅವರ ಪ್ರತಿ ನುಡಿಗಳು ಅನುಕರಣೀಯವಾಗಿದ್ದವು ಎಂದು ಬಿ.ವಾಮದೇವಪ್ಪ ನುಡಿದರು. ಅವರಿಂದು ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಿದ್ದೇಶ್ವರ ಸ್ವಾಮೀಜಿಗಳಿಗೆ ನುಡಿ ನಮನವನ್ನು ಸಲ್ಲಿಸಿ ಮಾತನಾಡಿದರು. ಅತ್ಯಂತ ಸರಳವಾದ ಅವರ ಪ್ರವಚನದ ಭಾಷೆಯಲ್ಲಿ ಗಾಂಭೀರ್ಯ ತುಳುಕಾಡುತ್ತಿತ್ತು. ಅವರ ಉಪದೇಶಗಳು ಜನರ ತಕ್ಷಣದ ಬದುಕಿನೊಂದಿಗೆ ಸಂಬಂಧ ಸಾಧಿಸುತ್ತಿದ್ದುವು. ಭಾವೈಕ್ಯತೆಯ ಪ್ರತಿರೂಪವಾಗಿದ್ದ ಶ್ರೀಗಳು ಎಂದಿಗೂ ಹಿಂದೂ ಮುಸ್ಲಿಂ ಎಂದು ತಾರತಮ್ಯವನ್ನು  ಮಾಡದೇ ವಚನಕಾರರ ಹಾಗೂ ತತ್ವಪದಕಾರರ ಅಪೂರ್ವ ಸಂಗಮದಂತಿದ್ದರು ಎಂದು ಬಿ.ವಾಮದೇವಪ್ಪ ಅವರು ಭಾವುಕರಾಗಿ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಮಾತನಾಡಿಬಂಧುತ್ವ ಮತ್ತು ಸಹಬಾಳ್ವೆಯನ್ನು  ಬೆಸೆಯುವ ಅವರ ಸಂದೇಶಗಳು ಜನಸಾಮಾನ್ಯರನ್ನು ಸುಲಭವಾಗಿ ತಲುಪುತ್ತಿದ್ದವು. ತಮ್ಮ ನಡೆ ಮತ್ತು ನುಡಿಯನ್ನು ಒಂದೇ ಮಾಡಿಕೊಂಡು ಆಧುನಿಕ ಗಾಂಧೀಜಿ ಎಂದು ಭಕ್ತ ಸಮೂಹದಿಂದ ಕರೆಸಿಕೊಂಡ ಶ್ರೀಗಳು ಮನುಕುಲದ ಅಭಿವೃದ್ಧಿಗೆ ಶ್ರಮಿಸಿದ ಶ್ರೇಷ್ಠ ಸಂತರಾಗಿದ್ದರು ಎಂದು ತಮ್ಮ ನುಡಿ ನಮನವನ್ನು ಸಲ್ಲಿಸಿದರು.