ಅರಾಭಿಕೊತ್ತನೂರು ಪ್ರೌಢಶಾಲಾ ಮಕ್ಕಳು ತಾಲ್ಲೂಕು ಹಂತಕ್ಕೆ ಆಯ್ಕೆ

ಕೋಲಾರ,ಆ,೯- ವಕ್ಕಲೇರಿ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನ ಹಾಗೂ ಅಥ್ಲೇಟಿಕ್ಸ್‌ನ ೧೦ ವಿಭಾಗಗಳಲ್ಲಿ ಸಾಧನೆ ಮಾಡುವ ಮೂಲಕ ತಾಲ್ಲೂಕು ಹಂತ ಪ್ರವೇಶಿಸಿದ್ದು, ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ಶುಭ ಕೋರಿದರು.
ಶಾಲೆಯ ಆವರಣದಲ್ಲಿ ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಅವರು, ಪಠ್ಯದಷ್ಟೇ ಕ್ರೀಡೆಗೂ ಮಹತ್ವವಿದೆ, ದೈಹಿಕ ಸಾಮರ್ಥ್ಯ ಮಾತ್ರ ಇದ್ದರೆ ಕ್ರೀಡೆಗಳಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ ಆದರ ಜತೆಗೆ ಕ್ರೀಡಾ ಸಂಯಮ, ಗೆಲ್ಲಬೇಕೆಂಬ ಛಲ, ಎದುರಾಳಿಯನ್ನು ಸೋಲಿಸುವ ತಂತ್ರಗಾರಿಕೆಯೂ ಅಗತ್ಯವಿದೆ ಎಂದು ತಿಳಿಸಿದರು.
ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಗಳು ಅತಿ ಮುಖ್ಯವಾಗಿದೆ, ವಿದ್ಯಾರ್ಥಿಗಳಲ್ಲಿ ಪಠ್ಯದ ಕಲಿಕಾಸಕ್ತಿ ಹೆಚ್ಚಿಸುವಲ್ಲಿಯೂ ಕ್ರೀಡೆಗಳು ಪ್ರಮುಖ ಪಾತ್ರ ವಹಿಸಿದ್ದು, ಎಂತಹ ಸೋಲೇ ಎದುರಾದರೂ ಅದನ್ನು ಎದುರಿಸಿ ನಿಲ್ಲುವ ಆತ್ಮಸ್ಥೈರ್ಯವನ್ನು ಮಕ್ಕಳಲ್ಲಿ ಬೆಳೆಸುತ್ತದೆ ಎಂದು ಅಭಿಪ್ರಾಯಪಟ್ಟರು.
ಹೋಬಳಿ ಮಟ್ಟದಲ್ಲಿ ಸರ್ಕಾರಿ,ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ವಿರುದ್ದ ಸೆಣಸಾಟ ನಡೆಸಿ ಗೆಲುವು ಸಾಧಿಸುವ ಮೂಲಕ ಅರಾಭಿಕೊತ್ತನೂರು ಶಾಲೆ ಉತ್ತಮ ಪರಿಸರ,ಉತ್ತಮ ಫಲಿತಾಂಶದ ಜತೆಗೆ ಕ್ರೀಡಾ ಸಾಧಕರನ್ನೂ ಹೊಂದಿದೆ ಎಂಬುದನ್ನು ಸಾಕ್ಷೀಕರಿಸಿದ್ದೀರಿ ಎಂದು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಕ್ರೀಡಾ ಚಟುವಟಿಕೆಗಳ ತರಬೇತಿ ನೀಡಿದ ದೈಹಿಕ ಶಿಕ್ಷಕಿ ಕೆ.ಲೀಲಾ, ಹೋಬಳಿ ಕ್ರೀಡಾಕೂಟಕ್ಕೆ ತಂಡದ ವ್ಯವಸ್ಥಾಪಕರಾಗಿ ಹೋಗಿದ್ದ ಶಿಕ್ಷಕರಾದ ಸುಗುಣ, ವೆಂಕಟರೆಡ್ಡಿ ಅವರನ್ನು ಅಭಿನಂದಿಸಿದರು.
ತಾಲ್ಲೂಕುಮಟ್ಟಕ್ಕೆ ಕಬ್ಬಡ್ಡಿ ತಂಡ:ಶಾಲೆಯ ಕಬ್ಬಡ್ಡಿ ತಂಡದಲ್ಲಿ ನಾಯಕ ಎಸ್.ಚರಣ್, ಸ್ಪರ್ಧಿಗಳಾಗಿ ಸಿ.ಆರ್.ತರುಣ್, ಧನಂಜಯ್, ವಿಕಾಸ್, ಮಿಥುನ್, ಭಾನುಪ್ರಕಾಶ್,ನಟರಾಜ್, ಯಶವಂತ್ ಆರಾಧ್ಯ, ಮುರುಗೇಶ್, ರೇಣೇಶ್, ವಿಲಾಸ್, ಮನೋಜ್ ಉತ್ತಮ ಪ್ರದರ್ಶನ ನೀಡಿ ಎದುರಾಳಿ ತಂಡಗಳ ವಿರುದ್ದ ಗೆಲುವು ಸಾಧಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದರು.
ಅಥ್ಲೇಟಿಕ್ಸ್‌ನಲ್ಲಿ ಸಾಧಕರಿವರು: ಅಥ್ಲೇಟಿಕ್ಸ್‌ನಲ್ಲೂ ಹಲವಾರು ವಿದ್ಯಾರ್ಥಿಗಳು ಸಾಧನೆ ಮಾಡಿದ್ದು, ಎತ್ತರ ಜಿಗಿತದಲ್ಲಿ ಸಿ.ಆರ್.ತರುಣ್ ಪ್ರಥಮಸ್ಥಾನ, ೮೦೦ ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ೪೦೦ ಮೀಟರ್ ಓಟದಲ್ಲಿ ವಿಲಾಸ್ ತೃತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಎತ್ತರಜಿಗಿತದಲ್ಲಿ, ೨೦೦ ಮೀಟರ್ ಓಟ ಎರಡರಲ್ಲೂ ಬಿ.ನವ್ಯಶ್ರೀ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಟಿ.ನವಿನ ೪೦೦ ಮೀಟರ್ ಓಟದಲ್ಲಿ ದ್ವಿತೀಯ, ಚಕ್ರ ಎಸೆತದಲ್ಲಿ ಸಿ.ಎಸ್.ಅಕ್ಷಿತಾ ದ್ವಿತೀಯ, ಉದ್ದಜಿಗಿತದಲ್ಲಿ ಎಸ್.ಅಮೂಲ್ಯ ತೃತೀಯ ಹಾಗೂ ಚಕ್ರ ಎಸೆತದಲ್ಲಿ ಎಸ್.ದೇವಿಕಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ಶ್ವೇತಾ,ಸುಗುಣಾ,ಕೆ.ಲೀಲಾ,ವೆಂಕಟರೆಡ್ಡಿ, ಶ್ರೀನಿವಾಸಲು, ಡಿ.ಚಂದ್ರಶೇಖರ್, ರಮಾದೇವಿ ಮತ್ತಿತರರು ಹಾಜರಿದ್ದರು.