ಅರಸೀಕೆರೆ: ವಿವಿಧ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ

ಅರಸೀಕೆರೆ, ಅ. ೨೮- ಆಯುಧಪೂಜೆ ಪ್ರಯುಕ್ತ ಡಿವೈಎಸ್‌ಪಿ ಕಚೇರಿ ಸೇರಿದಂತೆ ನಗರ ಗ್ರಾಮಾಂತರ ಹಾಗೂ ಜಾವಗಲ್ ಗಂಡಸಿ ಮತ್ತು ಬಾಣಾವರ ಪೊಲೀಸ್ ಠಾಣೆಗಳ ಶಸ್ತ್ರಾಸ್ತ್ರಗಳಿಗೆ ಹಾಗೂ ವಾಹನಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದ ಪೂಜಾ ಕೈಂಕರ್ಯದ ಸಂದರ್ಭದಲ್ಲಿ ಶಾಸಕ ಕೆ. ಎಂ. ಶಿವಲಿಂಗೇಗೌಡ, ಡಿವೈಎಸ್‌ಪಿ ನಾಗೇಶ್, ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ವಸಂತ್‌ಕುಮಾರ್, ನಗರಠಾಣೆ ಇನ್ಸ್‌ಪೆಕ್ಟರ್ ಚಂದ್ರಶೇಖರಯ್ಯ, ಸಬ್‌ಇನ್ಸ್‌ಪೆಕ್ಟರ್‌ಗಳಾದ ಬಸವರಾಜು, ತಿಮ್ಮಯ್ಯ ಹಾಗೂಸಿಬ್ಬಂದಿಗಳು ಉಪಸ್ಥಿತರಿದ್ದರು.
ನಾಡದೇವತೆ ಚಾಮುಂಡೇಶ್ವರಿ ದೇವಿಯ ಭಾವಚಿತ್ರದ ಮುಂದೆ ಕಳಸ ಪ್ರತಿಷ್ಠಾಪಿಸಿ ಇಲಾಖೆಯ ರೈಫಲ್, ರಿವಾಲ್ವರ್, ಪಿಸ್ತೂಲ್, ಕೈ ಕೋಳ, ಏರ್‍ಗನ್ ಗುಂಡುಗಳು ಸೇರಿದಂತೆ ವಿವಿಧ ಶಸ್ತ್ರಾಸ್ತ್ರಗಳನ್ನಿಟ್ಟು ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಲಾಯಿತು. ನಂತರ ಇಲಾಖೆಯ ವಾಹನಗಳಿಗೆ ಪೂಜೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ನಮ್ಮ ಪೂರ್ವಿಕರ ಪ್ರತಿಯೊಂದು ಆಚರಣೆಯಲ್ಲೂ ಅದರದೇ ಆದ ಮಹತ್ವವಿದೆ. ಅಲ್ಲದೆ ಈ ರೀತಿಯ ಆಚರಣೆಗಳಿಂದ ಪರಸ್ಪರ ವಿಶ್ವಾಸ ವೃದ್ಧಿಯಾಗಲಿದೆ. ನಾಡದೇವತೆ ಚಾಮುಂಡೇಶ್ವರಿ ದೇವಿಯ ಅನುಗ್ರಹದಿಂದ ಕೊರೊನಾದಿಂದ ನಾವೆಲ್ಲ ಮುಕ್ತಿ ಹೊಂದೋಣ ಎಂದರು.
ಡಿವೈಎಸ್‌ಪಿ ನಾಗೇಶ್ ಮಾತನಾಡಿ, ವಿಜಯದಶಮಿಗೂ ಮುನ್ನ ದಿನ ಇಲಾಖೆ ಬಳಸುವ ಶಸ್ತ್ರಾಸ್ತ್ರಗಳಿಗೂ ಹಾಗೂ ವಾಹನಗಳಿಗೂ ಪೂಜೆ ನೆರವೇರಿಸುವ ಸಂಪ್ರದಾಯವನ್ನು ಮೊದಲಿನಿಂದಲೂ ಪೊಲೀಸ್ ಇಲಾಖೆ ಮಾಡುತ್ತ ಬಂದಿದ್ದು, ಅದೇ ರೀತಿ ಈ ವಿಶೇಷ ದಿನದಂದು ಆಯುಧಗಳಿಗೆ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಿದರು.