ಅರಸೀಕೆರೆ: ಎತ್ತಿನಹೊಳೆ ಕಾಮಗಾರಿ ಬಹುತೇಕ ಮುಕ್ತಾಯ

ಅರಸೀಕೆರೆ, ನ. ೨೧- ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಹೆಚ್ಚಿಸುವ ಎತ್ತಿನಹೊಳೆ ಯೋಜನೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿ ಹಣ ಬಿಡುಗಡೆ ಮಾಡಿದ್ದು, ಯೋಜನೆ ಬಹುತೇಕ ಮುಕ್ತಾಯ ಹಂತದಲ್ಲಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ತಾಲ್ಲೂಕಿನ ಕಸಬಾ ಹೋಬಳಿ ಮುದ್ದರಂಗನಹಳ್ಳಿ ಮತ್ತು ತಿಮ್ಮಯ್ಯನ ಹಟ್ಟಿಗೆ ಸಂಪರ್ಕಿಸುವ ರಸ್ತೆ ಪರಿಮಿತಿಯಲ್ಲಿ ೫೦ ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಎತ್ತಿನಹೊಳೆ ಯೋಜನೆಗಾಗಿ ಸರ್ಕಾರ ೫ ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡದೆ ಆಯವ್ಯಯದಲ್ಲಿ ಕೇವಲ ೫೦೦ ಕೋಟಿ ರೂ. ಬಿಡುಗಡೆ ಮಾಡಿರುವುದರಿಂದ ಕಾಮಗಾರಿ ಕುಂಠಿತವಾಗಿದೆ. ಹಣ ಬಿಡುಗಡೆಗೆ ಸರ್ಕಾರಕ್ಕೆ ಒತ್ತಡ ತರುವ ಭರವಸೆ ನೀಡಿದರು.
ಸ್ವಾತಂತ್ರ್ಯ ಬಂದು ೭೦ ವರ್ಷಗಳಲ್ಲಿ ಟಾರ್ ರಸ್ತೆಯನ್ನು ಕಾಣದ ಗ್ರಾಮಗಳಿಗೆ ಕಾಂಕ್ರೀಟ್ ಹಾಕಿಸಿದ್ದೇನೆ ಎಂದರೆ ಅದು ನನ್ನ ಸಾಧನೆ. ಕ್ಷೇತ್ರದ ಜನ ತನ್ನನ್ನು ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಋಣಿಯಾಗಿದ್ದೇನೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದೇನೆ. ಜನರ ಅವಶ್ಯಕತೆಗಳನ್ನು ಅರಿತು ಸರ್ಕಾರದ ಎಲ್ಲ ಮೂಲಗಳಿಂದ ಅನುದಾನ ತಂದು ರಸ್ತೆ, ಚರಂಡಿ, ಶಾಲಾ-ಕಾಲೇಜು, ಕುಡಿಯುವ ನೀರು, ಇಂಜಿನಿಯರಿಂಗ್ ಕಾಲೇಜು, ಶೈಕ್ಷಣಿಕ ಸಂಸ್ಥೆಗಳು, ದೇವಸ್ಥಾನ ನಿರ್ಮಿಸಿ ಕೊಡಲು ಪ್ರಯತ್ನಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಮುರುಂಡಿ ಶಿವಯ್ಯ, ಮುಖಂಡರಾದ ಜವರಪ್ಪ, ಗಿಜಿಹಳ್ಳಿ ಧರ್ಮಶೇಖರ್, ಯಾದಾಪುರ ನಾರಾಯಣಮೂರ್ತಿ, ಮುದ್ದರಂಗನಹಳ್ಳಿ ತಮ್ಮಣ್ಣಗೌಡ, ಅಶೋಕ್, ಇಂಜಿನಿಯರ್ ದೀಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.