ಅರಸೀಕೆರೆ:ಜೆಡಿಎಸ್‌ನಿಂದ ಸಂತೋಷ್ ಕಣಕ್ಕೆ

ಬೆಂಗಳೂರು,ಏ.೧೫: ಅರಸೀಕೆರೆಯಿಂದ ಬಿಜೆಪಿ ಟಿಕೆಟ್ ಕೈ ತಪ್ಪಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಸಂಬಂಧಿ ಹಾಗೂ ಮುಖ್ಯಮಂತ್ರಿಗಳ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಜೆಡಿಎಸ್ ಅಭ್ಯರ್ಥಿಯಾಗಿ ಅರಸೀಕೆರೆಯಿಂದ ಕಣಕ್ಕಿಳಿಯಲಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್.ಆರ್. ಸಂತೋಷ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಇದರಿಂದ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯನ್ನು ಮಾಡಿದ್ದರು. ಹಾಗೆಯೇ, ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯುವಂತೆ ಒತ್ತಡವನ್ನೂ ಹೇರಿದ್ದರು.
ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದ ಎನ್.ಆರ್. ಸಂತೋಷ್‌ರವರು ಅರಸೀಕೆರೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದು, ಅದಕ್ಕೆ ದೇವೇಗೌಡರು ಸಕರಾತ್ಮಕವಾಗಿ ಸ್ಪಂದಿಸಿ ಸಂತೋಷ್‌ಗೆ ಟಿಕೆಟ್ ನೀಡಲು ಒಪ್ಪಿದ್ದಾರೆ.
ಅಧಿಕೃತವಾಗಿ ಇಂದು ಇಲ್ಲವೆ ನಾಳೆ ಅರಸೀಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಎನ್.ಆರ್. ಸಂತೋಷ್‌ರವರ ಹೆಸರನ್ನು ಪ್ರಕಟಿಸಲಾಗುತ್ತದೆ.