ಅರವಿಂದ ಚವ್ಹಾಣ್ ಮನೆ ಮೇಲೆ ಐಟಿ ರೇಡ್

ಕಲಬುರಗಿ,ಮೇ.7-ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಅರವಿಂದ ಚವ್ಹಾಣ್ ಅವರ ಮನೆ, ಬಾರ್ ಆ್ಯಂಡ್ ರೆಸ್ಟೋರಂಟ್ ಮತ್ತು ಕಂಕರ್ ಮಶೀನ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.
ಕಲ್ಲೂರ್ ತಾಂಡಾದಲ್ಲಿರುವ ಅರವಿಂದ ಚವ್ಹಾಣ್ ಅವರ ಮನೆ, ಸೇಡಂ ರಸ್ತೆಯಲ್ಲಿರುವ ಬಾರ್ ಆ್ಯಂಡ್ ರೆಸ್ಟೋರಂಟ್ ಮತ್ತು ಕಂಕರ್ ಮಶೀನ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆದಾಯಕ್ಕಿಂತ ಅಧಿಕ ಆಸ್ತಿಗಳಿಕೆಗೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅರವಿಂದ ಚವ್ಹಾಣ್ ಅವರು ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.