ಅರಮನೆ ನಗರಿ ಇಂದು ಅಕ್ಷರಶಃ ಮಂಜಿನ ನಗರಿ

ಮೈಸೂರು, ಡಿ.೨೮: ಅರಮನೆ ನಗರಿ ಇಂದು ಅಕ್ಷರಶಃ ಮಂಜಿನ ನಗರಿಯಾಗಿತ್ತು. ಬೆಳ್ಳಂಬೆಳಿಗ್ಗೆ ಕಣ್ಣು ಹಾಯಿಸಿದಷ್ಟು ಉದ್ದದಲ್ಲಿ ಮಂಜಿನ ರಾಶಿಯೇ ಗೋಚರಿಸಿತು.
ಮೈಸೂರಿನಲ್ಲಿ ಸರಿಸುಮಾರು ಪ್ರತಿ ಏರಿಯಾದಲ್ಲಿಯೂ ಚಾಮುಂಡಿಬೆಟ್ಟ ಕಾಣಸಿಗುವುದು ವಿಶೇಷವೇ ಸರಿ. ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟ ದಟ್ಟೈವಾದ ಮಂಜಿನಿಂದ ಆವರಿಸಿತ್ತು. ತಣ್ಣನೆಯಯ ಕುಳಿರ್ಗಾಳಿಯ ಜೊತೆ ತಣ್ಣನೆಯ ವಾತಾವರಣ ವಾಹನ ಸವಾರರನ್ನು ಗಡಗಡನೆ ನಡುಗಿಸಿತ್ತು. ವಿಶ್ವವಿದ್ಯಾಲಯದ ಕ್ಯಾಂಪಸ್ ಆವರಣದಲ್ಲಿನ ರಸ್ತೆಯಲ್ಲಿ ವಾಹನ ಸವಾರರು ತಮ್ಮ ವಾಹನಗಳಿಗೆ ಬೆಳಕು ಹಾಕಿಕೊಂಡು ವಾಹನ ಚಾಲನೆ ಮಾಡುವಂತಾಗಿತ್ತು.

ನೀಲಿ ಆಕಾಶದಿಂದ ಬರುತ್ತಿರುವಂತೆ ಭಾಸವಾಗುತ್ತಿದ್ದ ಮಂಜಿನ ಹನಿಗಳು ಹೊಸದೊಂದು ಲೋಕವನ್ನು ಸೃಷ್ಟಿಸಿತ್ತು. ಕೊರೋನಾ ಹಿನ್ನೆಲೆಯಲ್ಲಿ ಬೆಳಗಿನ ವಾಯುವಿಹಾರಕ್ಕೆ ತೆರಳುವವರ ಸಂಖ್ಯೆ ವಿರಳವಾಗಿರುವ ಕಾರಣ ಹೆಚ್ಚಿನವರಿಗೆ ದಟ್ಟೈಸಿದ ಮಂಜಿನ ದರ್ಶನವಾಗಲಿಲ್ಲ. ಒಂಭತ್ತು ಗಂಟೆಯನಂತರವೂ ನಗರದಲ್ಲಿ ದಟ್ಟವಾದ ಮಂಜು ಆವರಿಸಿಯೇ ಇತ್ತು. ಮನೆಯ ಬಾಗಿಲು ತೆರೆದಂತೆ ಬೆಚ್ಚಗೆ ಕುಳಿತಿದ್ದವರಿಗೆ ತಣ್ಣನೆಯ ನೀರು ಸೋಕಿದ ಅನುಭವ. ಬಳಿಕ ಮನೆಯ ಒಳಗೆ ಕುಳಿತರೂ ಚಳಿ, ಹೊರಗೆ ಬಂದರೂ ಚಳಿ. ಮೈಮನಗಳಿಗೆ ಏನೋ ಹೊಸತನ. ಹಿತವಾದ ಅನುಭವ. ಹೊತ್ತು ಸರಿದರೂ ಸೂರ್ಯರಶ್ಮಿಯ ದರ್ಶನವಾಗಲೇ ಇಲ್ಲ. ಉದ್ಯಾನವನಗಳಲ್ಲಿ ಹುಲ್ಲುಹಾಸೆಲ್ಲ ಮಂಜಿನ ಬಿಂದುವಿನಿಂದ ತೊಯ್ದಿದ್ದವು. ಚಳಿಯಿಂದ ತಪ್ಪಿಸಿಕೊಳ್ಳಲು ಜನ ಬೆಚ್ಚನೆಯ ಉಡುಪಿಗೆ ಮೊರೆ ಹೋಗಿದ್ದು ಕಂಡು ಬಂತು. ದ್ವಿಚಕ್ರವಾಹನ ಸವಾರರು ತಣ್ಣನೆಯ ಕುಳಿರ್ಗಾಳಿಗೆ ಸಿಲುಕಿ ನಲುಗಿದ್ದರು. ಕವಿ ಮನಸ್ಸಿನವರಲ್ಲಿ ಹೊಸ ಕವಿತೆಯನ್ನು ಸೃಷ್ಟಿಸಿ ಸಮಯಯವೇರುತ್ತಲೇ ಮರೆಯಾದಂತೆ ಭಾಸವಾಯಿತಾದರೂ ಮತ್ತೆ ನಾಳೆ ಇದೇ ತರಹ ಕಾಣಬಲ್ಲೆವೆಂಬ ಸದಾಶಯವನ್ನು ಹುಟ್ಟಿಸಿತ್ತು.