ಅರಮನೆ ಆವರಣದಲ್ಲಿ ಶ್ರೀಗಂಧದ ಮ್ಯೂಸಿಯಂ ಸ್ಥಾಪನೆಗೆ ಚಿಂತನೆ

ಮೈಸೂರು, ನ.9:- ಶ್ರೀಗಂಧದ ಮ್ಯೂಸಿಯಂ ಅನ್ನು ಅರಮನೆ ಆವರಣದಲ್ಲೇ ಎಲ್ಲಾದರೂ ಒಂದು ಜಾಗದಲ್ಲಿ ಮಾಡಿದರೆ ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗಲಿಯೆಂಬ ಚಿಂತನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಅವರಿಂದು ಅಶೊಕಪುರಂ ಅರಣ್ಯಭವನದಲ್ಲಿರುವ ಸ್ಯಾಂಡಲ್ ಕೋಟ್ ಶ್ರೀಗಂಧದ ವಸ್ತು ಸಂಗ್ರಹಾಲಯ ವೀಕ್ಷಣೆ ನಡೆಸಿ ಮಾತನಾಡಿದರು. ಇಲ್ಲಿನ ಅಶೋಕಪುರಂನಲ್ಲಿರುವ ಶ್ರೀಗಂಧದ ವಸ್ತು ಸಂಗ್ರಹಾಲಯ ವೀಕ್ಷಣೆ ಮಾಡಿದ ಸಚಿವರು, ಸ್ಯಾಂಡಲ್ ಅಂದರೆ ಏನು? ಅದು ಹೇಗಿರಲಿದೆ? ಅದರ ಉಪಯೋಗಗಳೇನು..? ಗುಣಮಟ್ಟಗಳ ಆಧಾರದಲ್ಲಿ ಶ್ರೀಗಂಧದ ವರ್ಗೀಕರಣ ಸೇರಿದಂತೆ ಇನ್ನಿತರ ಮಾಹಿತಿಯನ್ನು ಸಚಿವರು ಪಡೆದುಕೊಂಡರು.
ನವೆಂಬರ್ 24 ಅಥವಾ 25ರಂದು ಶ್ರೀಗಂಧದ ಮ್ಯೂಸಿಯಂಗೆ ಚಾಲನೆ ಸಿಗಲಿದೆ . ಶ್ರೀಗಂಧದ ಮ್ಯೂಸಿಯಂ ಉದ್ಘಾಟನೆ ಮಾಡಬೇಕು ಅಂತ ಹೇಳಿದ್ದಾರೆ. ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿದ್ದೇವೆ. ಅರಣ್ಯ ಇಲಾಖೆಯವರು ಕೂಡ ಡಿಪಾಟ್ರ್ಮೆಂಟ್ ಮೂಲಕ ಮನವಿ ಮಾಡಿದ್ದಾರೆ. ನಾನು ನ.24 ಮತ್ತು 25ರಂದು ಮೈಸೂರಿಗೆ ಬರೋದರಿಂದ ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿದ್ದೇನೆ ಬರುತ್ತೇನೆ ಅಂತ ಹೇಳಿ ಅವರು ಒಪ್ಪಿಕೊಂಡಿದ್ದಾರೆ ಎಂದರು.
ಈಗ ನಮ್ಮ ಚಿಂತನೆ ಇಲ್ಲಿ ಮಾಡೋ ಬದಲು ಅರಮನೆಯಲ್ಲೂ ಮಾಡಿದರೆ ಸಾರ್ವಜನಿಜರಿಗೆ ನೋಡಲಿಕ್ಕೆ ಅನುಕೂಲ ಆಗಲಿದೆ. ಅದಕ್ಕೆ ಅರಮನೆಯವರಿಗೆ ವಿನಂತಿ ಮಾಡಿ ಅಂತ ಹೇಳಿದ್ದೇನೆ. ನಮ್ಮ ಮುಖ್ಯ ಕಾರ್ಯದರ್ಶಿಗಳೆ ಅಧ್ಯಕ್ಷ ರಾಗಿ ಇರೋದರಿಂದ ಅವರ ಬಳಿ ಮನವಿ ಮಾಡಿ ಅರಣ್ಯ ಮಂತ್ರಿಗಳು, ನಾವು ಇಬ್ಬರೂ ಒಂದು ಒಳ್ಳೆಯ ಜಾಗವನ್ನು ಅರಮನೆಯಲ್ಲಿಯೇ ಕೊಡಿಸಿದರೆ ಸಾವಿರಾರು ಮಂದಿ ಬಂದಂತಹ ಸಮಯದಲ್ಲಿ ಇದನ್ನು ವೀಕ್ಷಣೆ ಮಾಡತಕ್ಕಂತದ್ದಕ್ಕೆ ಅನುಕೂಲ ಆಗಲಿದೆ ಎಂದರು.


ಇತ್ತೀಚೆಗೆ ರೈತರಿಗೆ ಕೂಡ ಶ್ರೀಗಂಧ ಬೆಳೆಯವುದ್ದಕ್ಕೆ ಅನುಮತಿ ನೀಡಿದ್ದಾರೆ. ಯಾವ ತರ ಬೆಳೆಯಬೇಕು. ಏನು ಮಾಡಬೇಕೆಂದು ರೈತರಿಗೆ ಕೂಡ ತರಬೇತಿ ಕೊಡುವಂತದ್ದು ಅದೆಲ್ಲವನ್ನು ಮಾಡುತ್ತಿದ್ದಾರೆ. ಬೇಕಾದಷ್ಟು ಬೇರೆ ಬೇರೆ ಡಿಪಾರ್ಟ್ ಮೆಂಟ್ ನವರು ಕೇಳಿದ್ದು ಕೊಡತಕ್ಕಂತಹ ವ್ಯವಸ್ಥೆ ಯನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಮ್ಯೂಸಿಎಂ ಅನ್ನು ಅರಮನೆ ಆವರಣದಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದ್ದು, ಶೀಘ್ರದಲ್ಲಿ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಬಳಿಕ ಮುಖ್ಯಮಂತ್ರಿಗಳ ದಿನಾಂಕವನ್ನು ಗೊತ್ತುಪಡಿಸಿಕೊಂಡು ಉದ್ಘಾಟನೆಯ ದಿನಾಂಕವನ್ನು ತಿಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಅಧಿಕಾರಿಗಳಿಂದ ಮಾಹಿತಿ
ರೈತರು ತರುವ ಶ್ರೀಗಂಧದ ಉತ್ಪನ್ನಗಳನ್ನು ಗುಣಮಟ್ಟಕ್ಕೆ ಅನುಗುಣವಾಗಿ ವರ್ಗೀಕರಿಸಿ ಗೋಡೋನ್ ನಲ್ಲಿಡಲಾಗುವುದು. ಹೀಗೆ ಸಂಗ್ರಹ ಮಾಡಿದ ಶ್ರೀಗಂಧವನ್ನು ವರ್ಷದಲ್ಲಿ 2 ಬಾರಿ ಹರಾಜು ಹಾಕಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಬಗ್ಗೆ ಅರಣ್ಯ ಇಲಾಖೆ ಸಚಿವರಾದ ಆನಂದ್ ಸಿಂಗ್ ಅವರೊಂದಿಗೆ ಶೀಘ್ರದಲ್ಲಿ ಮಾತುಕತೆ ನಡೆಸಿ ಅನುಮತಿ ಕೊಡಿಸುವ ಕೆಲಸ ಮಾಡುತ್ತೇನೆ. ಶ್ರೀಗಂಧದ ರಕ್ಷಣೆ ಹಾಗೂ ಪ್ರಚಾರದ ಅಗತ್ಯವಿದೆ. ಅಲ್ಲದೆ, ಮೈಸೂರಿಗೂ ಶ್ರೀಗಂಧಕ್ಕೂ ಸಾಕಷ್ಟು ನಂಟು ಇದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ಎಪಿಸಿಸಿಎಫ್ ಜಗತ್ ರಾಮ್, ಸಿಸಿಎಫ್ ಹೀರಾಲಾಲ್, ಡಿಸಿಎಫ್ ಗಳಾದ ಪ್ರಶಾಂತ್ ಕುಮಾರ್, ಅಲೆಕ್ಸಾಂಡರ್ ಹಾಗೂ ಎಸಿಎಫ್ ಗಳಾದ ರಂಗಸ್ವಾಮಿ, ಅನುಶಾ ಸಚಿವರಿಗೆ ಸಾಥ್ ನೀಡಿದರು.